ಕಿಕ್ಕೇರಿ: ಕನ್ನಡದ ಮನಸ್ಸು ಕಟ್ಟುವ ಪರಿಸರವನ್ನು ವಿದ್ಯಾರ್ಥಿ ದಿಸೆಯಲ್ಲಿ ಮೂಡಿಸಲು ಶಿಕ್ಷಕರು ಮುಂದಾಗಬೇಕು ಎಂದು ಶಿಕ್ಷಕ ಕುಮಾರಸ್ವಾಮಿ ತಿಳಿಸಿದರು.
ಸಮೀಪದ ಮಂದಗೆರೆಯ ಹೇಮಾವತಿ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇತ್ತೀಚೆಗೆ ಆಯೋಜಿಸಿದ್ದ ಶಾಲೆಗೊಂದು ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾವೇರಿಯಿಂದ ಗೋದಾವರಿ ಉದ್ದಗಲಕ್ಕೆ ಹಬ್ಬಿದ ಕನ್ನಡ ನಾಡು ತನ್ನದೇ ಆದ ಹಿರಿಮೆ ಗರಿಮೆ ಹೊಂದಿದೆ. ಮಕ್ಕಳಿಗೆ ಮೊದಲ ತೊದಲು ಭಾಷೆ ಕನ್ನಡ. ಭಾಷೆಯಲ್ಲಿ ಉತ್ತಮ ಪಾಂಡಿತ್ಯ, ಸ್ಪಷ್ಟವಾಗಿ ಓದುವ ಹವ್ಯಾಸ ರೂಢಿಸಿಕೊಳ್ಳಲು ಶಿಕ್ಷಕರು, ಪಾಲಕರು ಉತ್ತೇಜಿಸುವ ಕೆಲಸ ಮಾಡಬೇಕು. ಶಾಲಾ, ಕಾಲೇಜು ಹಂತದಲ್ಲಿ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಹತ್ತು ಹಲವು ಸ್ಪರ್ಧೆಗಳನ್ನು ಪ್ರತಿ ತಿಂಗಳು ಹಮ್ಮಿಕೊಂಡರೆ ಮಕ್ಕಳಿಗೆ ಟಾನಿಕ್ ರೀತಿ ಭಾಷೆ ಕೆಲಸ ಮಾಡಲಿದೆ ಎಂದರು.
ಸಿಆರ್‌ಪಿ ಶ್ರೀಕಾಂತರಾಜೇ ಅರಸ್ ಮಾತನಾಡಿ, ಕನ್ನಡ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಗಟ್ಟಿಯಾಗಿದೆ. ಮಕ್ಕಳಿಗೆ ಕನ್ನಡ ಮಾತನಾಡಲು, ಭಾಷಾ ಮಾಧ್ಯಮವಾಗಿ ಕನ್ನಡ ಭಾಷೆ ಸ್ವೀಕರಿಸಲು ಪಾಲಕರು ಉತ್ತೇಜಿಸಬೇಕಿದೆ. ಶ್ರೇಷ್ಠ ವ್ಯಕ್ತಿಗಳು ಬಹುತೇಕ ತಮ್ಮ ಮಾತೃಭಾಷೆಯಲ್ಲಿ ಓದಿದವರು ಎಂಬುದನ್ನು ಮಕ್ಕಳಿಗೆ ತಿಳಿಸಿ ಪ್ರೋತ್ಸಾಹಿಸುವ ಕೆಲಸ ಮಾಡಿದರೆ ಭಾಷೆ ಮಕ್ಕಳ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಯಲಿದೆ ಎಂದರು.
ಮುಖಂಡರಾದ ಮುಕುಂದಸ್ವಾಮಿ, ನಂದೀಶ್, ರೋಹಿತ್, ಎನ್.ಇ. ಶೇಖರ್, ಲಲಿತಾಬಾಯಿ ಹಾಜರಿದ್ದರು.