ಜಿಲ್ಲೆ

ರಾಜ್ಯದಲ್ಲಿ ಕನ್ನಡ ಕಲಿಕೆ ಕಡ್ಡಾಯವಾಗಲಿ

ಜಿ.ಹೆಚ್. ಧನ್ಯಕುಮಾರ್

ಎನ್.ಆರ್.ಪುರ: ರಾಜ್ಯದಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಕನ್ನಡ ಭಾಷೆ ಕಲಿಯಬೇಕು ಎಂದು ಮೆಣಸೂರು ಮೌಂಟ್‌ಕಾರ್ಮೆಲ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಸಿಸ್ಟರ್ ಶುಭ ಹೇಳಿದರು.

ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮ, ಪ್ರತಿಭಾ ಪುರಸ್ಕಾರ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯವು ಉತ್ತಮ ಸಂಸ್ಕೃತಿ ಇರುವ ರಾಜ್ಯವಾಗಿದೆ. ಕನ್ನಡ ನಾಡಿನಲ್ಲಿ ಹುಟ್ಟಿರುವುದಕ್ಕೆ ನಾವು ಹೆಮ್ಮೆ ಪಡಬೇಕಾಗಿದೆ. ಕನ್ನಡ ಭಾಷೆ ಉಳಿವಿಗೆ ಕಸಾಪ ಸದಾ ಹೋರಾಟ ಮಾಡುತ್ತಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ 115 ವರ್ಷದಿಂದ ಕನ್ನಡ ಭಾಷೆಯ ಉಳಿವಿಗೆ ಹೋರಾಡುತ್ತಿದೆ. ನೆಲ,ಜಲ, ಭಾಷೆ, ಸಂಸ್ಕೃತಿಗೆ ಧಕ್ಕೆ ಬಂದಾಗ ಹೋರಾಟದಲ್ಲಿ ಕಸಾಪ ಮುಂದೆ ನಿಲ್ಲುತ್ತದೆ. ಈಗಾಗಲೇ ಆಷಾಡ, ಶ್ರಾವಣ ಮಾಸದಲ್ಲಿ ಹಲವಾರು ವಿಶೇಷ ಕಾರ್ಯಕ್ರಮ ನಡೆಸಲಾಗಿದೆ ಎಂದರು.

ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ದಿನ ಪತ್ರಿಕೆಗಳು ಒಂದೇ ನಾಣ್ಯ ಎರಡು ಮುಖಗಳು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾಷೆ ಬೆಳವಣಿಗೆ ಬಗ್ಗೆ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಮಕ್ಕಳು ಪಠ್ಯ ಪುಸ್ತಕದ ಜತಗೆ ದಿನ ಪತ್ರಿಕೆಗಳನ್ನು ಪ್ರತಿ ನಿತ್ಯ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ದಿನ ಪತ್ರಿಕೆಗಳನ್ನು ಓದುವುದರಿಂದ ಕನ್ನಡ ಭಾಷಾ ಜ್ಞಾನ ಬೆಳೆಯಲಿದೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯದ ಸುದ್ದಿಗಳು ತಿಳಿಯಲಿದೆ. ಕನ್ನಡ ದಿನ ಪತ್ರಿಕೆಗಳು ನಿಖರವಾದ ಸುದ್ದಿ ನೀಡುತ್ತದೆ ಎಂದರು.

ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಟಿ.ಮಂಜುನಾಥ್ ಇದ್ದರು.