ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದಲ್ಲಿ ತಾಲೂಕು ನಾಲ್ಕನೇ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ಉದ್ಘಾಟಿಸಿದರು. ಶ್ರೀ ರಂಭಾಪುರಿ ಜಗದ್ಗುರುಗಳು, ಎ.ಸಿ.ಚಂದ್ರಪ್ಪ, ಶ್ರೀ ರುದ್ರಮುನಿಶಿವಾಚಾರ್ಯ ಸ್ವಾಮೀಜಿ, ಶ್ರೀ ರೇಣುಕಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.  
ಜಿಲ್ಲೆ

ಕನ್ನಡ ಎಲ್ಲರ ಉಸಿರಾಗಲಿ

ಕಡೂರು: ನಾಡು, ನುಡಿ ಮೇಲೆ ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು. ಸ್ವಾಭಿಮಾನ ಇಲ್ಲದಿದ್ದರೆ ಎನ್ನನ್ನೂ ಸಾಧಿಸಲು ಆಗದು. ಕರ್ನಾಟಕ ಹೆಸರಾಯಿತು, ಆದರೆ ಉಸಿರಾಗಬೇಕಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದಲ್ಲಿ ಭಾನುವಾರ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕನ್ನಡ ಭಾಷೆ ಸೊರಗುತ್ತಿರುವುದು ನೋವಿನ ಸಂಗತಿ. ಕನ್ನಡ ಭಾಷೆ ಸೊಗಡು ಬೇರೆಲ್ಲಿಯೂ ಕಾಣಲಾಗದು. ಕರ್ನಾಟಕದ ಗಡಿ ಭಾಗಗಳಲ್ಲಿ ಕನ್ನಡ ಶಾಲೆಗಳು ಕ್ಷೀಣಿಸುತ್ತಿವೆ. ಅವುಗಳನ್ನು ತ್ವರಿತವಾಗಿ ಪುನಶ್ಚೇತನಗೊಳಿಸಬೇಕು ಎಂದರು.
ಪ್ರತಿನಿತ್ಯ ಕನ್ನಡ ಬಳಕೆ ಪ್ರೋತ್ಸಾಹಿಸಬೇಕು. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತಾಗಲು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಂಘಟನೆಗಳು ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎ.ಸಿ.ಚಂದ್ರಪ್ಪ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಸ್ವಾಭಿಮಾನದ ಸಂಕೇತ. ನಮ್ಮ ಉಸಿರು ಕನ್ನಡವಾಗಬೇಕು. ಕನ್ನಡ ಭಾಷೆ ಮತ್ತು ಸಂಸ್ಕೃತಿ ಶ್ರೀಮಂತವಾದುದು. ಸಮ್ಮೇಳನದ ಮೂಲಕ ಮಕ್ಕಳಲ್ಲಿ ಭಾಷಾ ಪ್ರೇಮ ಹೆಚ್ಚಿಸುವುದರ ಜತೆಗೆ ಮನೆ ಎಂಬ ಪ್ರಾಥಮಿಕ ಶಾಲೆಯಲ್ಲಿ ಕನ್ನಡದ ಜೀವಂತಿಕೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಕುರಿತಾದ ಎರಡು ಪ್ರಮುಖ ಗೋಷ್ಠಿಗಳು ನಡೆದವು.
ನಮ್ಮ ಜಿಲ್ಲೆಯಲ್ಲೇ ಹುಟ್ಟಿರುವ ಭದ್ರಾ ನದಿಗೆ ನಮ್ಮ ಜಿಲ್ಲೆಯಲ್ಲೇ ಅಣೆಕಟ್ಟು ಕಟ್ಟಿದರೂ ನೀರು ಮಾತ್ರ ಪರರ ಪಾಲಾಗಿದೆ. ಸರ್ಕಾರ ಭದ್ರಾ ನೀರನ್ನು ಅಜ್ಜಂಪುರ ತಾಲೂಕಿನ ಎಲ್ಲ ಕೆರೆಗಳಿಗೆ ತುಂಬಿಸಬೇಕು. ಅಜ್ಜಂಪುರ ಕಲಾಸೇವಾ ಸಂಘವನ್ನು ಪುನಶ್ಚೇತನಗೊಳಿಸಿ ಹೊಸ ರಂಗಮಂದಿರ ನಿರ್ಮಿಸಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಅಜ್ಜಂಪುರ ತಾಲೂಕು ಘೋಷಣೆಯಾಗಿ 6 ವರ್ಷ ಗಳಾದರೂ ಪರಿಪೂರ್ಣವಾಗಿ ಸರ್ಕಾರಿ ಕಚೇರಿಗಳನ್ನು ಆರಂಭಿಸಿಲ್ಲ. ಎಲ್ಲ ಇಲಾಖೆಗಳ ಕಚೇರಿಗಳನ್ನೂ ಪ್ರಾರಂಭಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಬೀರೂರು ರಂಭಾಪುರಿ ಶಾಖಾಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮದೇಶಿ ಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಜಿ.ಉಮಾಪತಿ ಆರಾಧ್ಯ, ಎಚ್.ಆರ್.ಚಂದ್ರಪ್ಪ, ಡಿ.ಮಲ್ಲಿಕಾರ್ಜುನ್, ಎಂ.ಒ.ಮಮತೇಶ್, ಕೆ.ಸಿ.ಶಿವಮೂರ್ತಿ, ಎಚ್.ಎಂ.ಲೋಕೇಶ್, ಬಿ.ಪಿ.ಶಿವಮೂರ್ತಿ, ಇಮ್ರಾನ್ ಅಹ್ಮದ್ ಬೇಗ್, ಎ.ಸಿ.ಚಂದ್ರಪ್ಪ, ಎಸ್.ಸಿದ್ದರಾಮಪ್ಪ, ಜಿ.ಎಲ್.ಮಂಜುನಾಥ್, ಅಜ್ಜಂಪುರ ಶ್ರುತಿ, ಗಾಯತ್ರಮ್ಮ, ಮುಗುಳಿ ಲಕ್ಷ್ಮೀ ದೇವಮ್ಮ, ಸಿಂಗಟಗೆರೆ ಸಿದ್ದಪ್ಪ, ಕಸಾಪ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಇದ್ದರು.