ಬಳ್ಳಾರಿ : ಕನಕದಾಸರ ತಾತ್ವಿಕತೆಯ ಚಿಂತನೆ, ಸಂಗೊಳ್ಳಿ ರಾಯಣ್ಣರ ಧೈರ್ಯ, ಆದರ್ಶ ನಮಗೆಲ್ಲ ಸ್ಫೂರ್ತಿಯಾಗಬೇಕು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ಡಾ.ರಾಜ್‌ಕುಮಾರ್ ರಸ್ತೆಯ ರಾಘವ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಸಂತ ಶ್ರೇಷ್ಠ ಕವಿ ಭಕ್ತ ಕನಕದಾಸ 536ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರ ಆಧ್ಯಾತ್ಮಕ ವಿಷಯಗಳಿಂದ ಸಮಾಜದ ತಲ್ಲಣಕ್ಕೆ ಕಾರಣವಾಯಿತು. ಅದೇ ರೀತಿಯಾಗಿ ಸಂಗೋಳ್ಳಿ ರಾಯಣ್ಣನಂತಹ ಪರಾಕ್ರಮಿಯು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಯುದ್ಧಗಳನ್ನು ಎದುರಿಸಿದ್ದು ಸ್ಮರಣೀಯ. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಮಾತನಾಡಿ, ಕನಕದಾಸರು ಹಲವಾರು ವಚನ ಸಾಹಿತ್ಯಗಳನ್ನು ರಚಿಸಿದ್ದಾರೆ. ಸಮಾಜದ ಒಳಿತಿಗಾಗಿ ಶ್ರಮಿಸಿದವರಾಗಿದ್ದು, ಅವರ ಜೀವನ ಮೌಲ್ಯ, ಸಿದ್ಧಾಂತಗಳನ್ನು ಅಳವಡಿಸಿಕೊಂಡರೆ ಪ್ರತಿಯೊಬ್ಬರ ಜೀವನ ಸುಗಮವಾಗುತ್ತದೆ ಎಂದರು.
ಕನ್ನಡ ಪ್ರಾಧ್ಯಾಪಕ ಬಿ.ಎರ‌್ರಿಸ್ವಾಮಿ ಉಪನ್ಯಾಸ ನೀಡಿ, ಕುಲ-ಕುಲ ಎಂದು ಹೊಡೆದಾಡದಿರಿ, ದೇಹ, ಆತ್ಮ, ಗಾಳಿ, ನೀರು, ಬೆಳಕು ಇವುಗಳಿಗೆ ಯಾವ ಕುಲವಿದೆ ಎಂದು ತಿಳಿಸಿಕೊಟ್ಟ ಮಹಾನ್ ಸಂತ ಕನಕದಾಸರು. 15 ಮತ್ತು 16ನೇ ಶತಮಾನದ ಜನಪ್ರಿಯ ಭಕ್ತಿಪಂಥದ ಮುಖ್ಯ ದಾಸಶ್ರೇಷ್ಠರಲ್ಲಿ ಕನಕದಾಸರು ಒಬ್ಬರು. ದಾಸ ಸಾಹಿತ್ಯದಲ್ಲಿ ಜೀವನ ಪಾಠವನ್ನು ಕಂಡುಕೊಂಡವರು. ಅವರ ಜೀವನ ಚರಿತ್ರೆ, ಕೀರ್ತನೆಗಳು ಎಲ್ಲರಿಗೂ ಸ್ಫೂರ್ತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಾಲಿಕೆ ಉಪ ಮೇಯರ್ ಬಿ.ಜಾನಕಿ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್, ಪಾಲಿಕೆ ಸದಸ್ಯೆ ಈರಮ್ಮ ಸುರೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಗಾದಿಲಿಂಗನಗೌಡ ಸೇರಿದಂತೆ ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು, ಮುಖಂಡರು ಹಾಗೂ ಮತ್ತಿತರು ಉಪಸ್ಥಿತರಿದ್ದರು.