ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಹಮ್ಮಿಕೊಂಡ ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಆರೋಗ್ಯ ಎಂಬ ವಿಷಯದ ಕುರಿತ ಮಾಧ್ಯಮ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ.ಸಪ್ನಾ ಎಂ.ಎಸ್ ಮಾತನಾಡಿದರು. ಪ್ರೊ. ಓಂಕಾರ ಕಾಕಡೆ, ಪ್ರಸೂನ್ ಸೇನ್ ಇದ್ದಾರೆ.  
ಜಿಲ್ಲೆ

ಪತ್ರಕರ್ತರು ಸಮಸ್ಯೆಗೆ ಪರಿಹಾರವೂ ಹುಡುಕಲಿ; ಪ್ರೊ.ಸಪ್ನಾ ಎಸ್.ಎಂ

Vijyapura - Parsuram Bhasagi

ವಿಜಯಪುರ: ಪತ್ರಕರ್ತರು ಕೇವಲ ಸಮಸ್ಯೆಗಳನ್ನೇ ವರದಿ ಮಾಡಬಾರದು, ಅದಕ್ಕೆ ಪರಿಹಾರಗಳನ್ನು ಹುಡುಕುವುದೂ ಅವರ ಜವಾಬ್ದಾರಿಯಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ.ಸಪ್ನಾ ಎಸ್.ಎಂ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಯುನಿಸೆಫ್ ಪ್ರಾಯೋಜಕತ್ವದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡ ‘ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಆರೋಗ್ಯ’ ಎಂಬ ವಿಷಯದ ಕುರಿತ ಮಾಧ್ಯಮ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಭಿವೃದ್ಧಿ ಮತ್ತು ಸಕಾರಾತ್ಮಕ ವಿಷಯಗಳ ಬಗ್ಗೆ ಹೆಚ್ಚಿನ ಸುದ್ಧಿಗಳನ್ನು ಮಾಡಬೇಕು. ಸಮಾಜದಲ್ಲಿ ಬದಲಾವಣೆ ತರುವ ಅಭಿಯಾನಗಳ ಮೂಲಕ ವರದಿ ಮಾಡಬೇಕು. ವಿಶೇಷವಾಗಿ ಪತ್ರಕರ್ತರು ಮಕ್ಕಳ ಧ್ವನಿಯಾಗಿ ಅವರ ಸಮಸ್ಯೆಗಳನ್ನು, ಅಭಿರುಚಿಗಳನ್ನು ಮತ್ತು ಸಾಧನೆಗಳನ್ನು ಜನರ ಮುಂದೆ ತರುವುದರಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.

ಈ ರೀತಿಯ ಕಾರ್ಯಾಗಾರಗಳು ಪತ್ರಕರ್ತರ ಬರವಣಿಗೆಯ ಕೌಶಲ ಹೆಚ್ಚಿಸಲು ಮತ್ತು ಭವಿಷ್ಯದಲ್ಲಿ ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಬಗ್ಗೆ ಇನ್ನಷ್ಟು ವರದಿಗಳನ್ನು ರಚಿಸಲು ಪ್ರೇರಣೆ ನೀಡುತ್ತವೆ ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಮಾತನಾಡಿ, ಇತ್ತೀಚೆಗೆ ಅಭಿವೃದ್ಧಿ ವರದಿಗಾರಿಕೆಗೆ ಗಮನ ಕೊಡುವ ಪ್ರಮಾಣವು ಕಡಿಮೆಯಾಗಿದೆ. ಆದರೆ, ಅಭಿವೃದ್ಧಿ ಪತ್ರಿಕೋದ್ಯಮವೇ ನಿಜವಾದ ಪ್ರಗತಿ ಮತ್ತು ಯಶಸ್ಸು ತಂದುಕೊಡುವ ಮಾರ್ಗವಾಗಿದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡುವುದಕ್ಕೆ ಪತ್ರಕರ್ತರು ನಿಸ್ಸಂದೇಹವಾಗಿ ಸಮಾಜದ ಒಳಿತಿಗಾಗಿ ಬದ್ಧರಾಗಿರಬೇಕು. ಈ ಕಾರ್ಯಾಗಾರದಲ್ಲಿ ತಜ್ಞರು ಮಂಡಿಸಿದ ಮಾಹಿತಿ, ಅವರ ಮಾರ್ಗದರ್ಶನ ಮತ್ತು ಉಲ್ಲೇಖಗಳನ್ನು ನಮ್ಮ ಬರವಣಿಗೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ಕಾರ್ಯಾಗಾರವು ಸಾರ್ಥಕವಾಗಲು ಸಾಧ್ಯ ಎಂದರು.

ಪತ್ರಕರ್ತರು ಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ ಹಾಗೂ ಅವುಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಹೆಚ್ಚು ಆಳವಾದ, ಸಮಗ್ರ ವರದಿಗಳನ್ನು ಮಾಡಬೇಕು. ಇದರಿಂದಾಗಿ ಸಮಾಜದಲ್ಲಿ ಮಕ್ಕಳ ಅಭಿವೃದ್ದಿಗೆ ಮತ್ತು ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಪ್ರೋತ್ಸಾಹ ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಯುನಿಸೆಫ್‌ನ ಪ್ರಸೂನ್ ಸೇನ್ ಮಾತನಾಡಿದರು. ಪತ್ರಕರ್ತರಾದ ಡಿ.ಬಿ. ವಡವಡಗಿ, ಬಸವರಾಜ ಉಳ್ಳಾಗಡ್ಡಿ ಮತ್ತು ಜಗದೀಶ್ ಅನಿಸಿಕೆಗಳನ್ನು ಹಂಚಿಕೊಂಡರು. ಸಹಾಯಕ ಪ್ರಾಧ್ಯಾಪಕಿ ಡಾ.ತಮೀನಾ ಕೋಲಾರ, ಬೆಳಗಾವಿ ವಿಭಾಗದ ವಿವಿಧ ಜಿಲ್ಲೆಗಳಿಂದ ಆಯ್ದ 30ಕ್ಕೂ ಅಧಿಕ ಪತ್ರಕರ್ತರು ಇದ್ದರು.
ಸಹಾಯಕ ಪ್ರಾಧ್ಯಾಪಕ ಸಂದೀಪ್ ನಾಯಕ್ ನಿರೂಪಿಸಿ, ವಂದಿಸಿದರು.