ಮೈಸೂರು: ಉದ್ಯೋಗಕ್ಕಾಗಿ ಶಿಕ್ಷಣ ಎನ್ನುವುದಕ್ಕಿಂತ ಜ್ಞಾನ ಪಡೆಯಲು ಕಲಿಯಬೇಕು ಎನ್ನುವುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಭಿಪ್ರಾಯಪಟ್ಟರು.
ಡಾ.ಚಂದ್ರಶೇಖರ್ ಫೌಂಡೇಷನ್, ಕಾವೇರಿ ಸಮೂಹ ವಿದ್ಯಾಸಂಸ್ಥೆಗಳಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ 17ನೇ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ಶಿಕ್ಷಣ ಎಂದರೆ ಕೇವಲ ಉದ್ಯೋಗಕ್ಕಾಗಿ ಎನ್ನುವ ಮನಸ್ಥಿತಿ ಬಂದಿದೆ. ಆದರೆ ಜ್ಞಾನಕ್ಕಾಗಿ ಶಿಕ್ಷಣ ಪಡೆದಾಗ ಉದ್ಯೋಗಗಳು ತಮಗೆ ತಾವೇ ಅರಸಿ ಬರುತ್ತವೆ. ಜ್ಞಾನದ ಜತೆಗೆ ಕೌಶಲ್ಯವೂ ದೊರೆತಾಗ ಇನ್ನಷ್ಟು ಉನ್ನತ ಮಟ್ಟಕ್ಕೆ ಹೋಗಲು ನೆರವಾಗುತ್ತದೆ ಎಂದು ಹೇಳಿದರು.
ಕೇವಲ ಪದವಿ ಪಡೆಯುವುದಷ್ಟೇ ಇಂದಿನ ವಿದ್ಯಾರ್ಥಿಗಳ ಗುರಿಯಾಗುತ್ತಿದೆ. ಪದವಿ ಜತೆಗೆ ಕೌಶಲವೂ ಬೇಕಿದೆ. ವೈದ್ಯಕೀಯ ರಂಗದ ಮಹತ್ವ ಕರೊನಾ ಸಮಯದಲ್ಲಿ ಇಡೀ ಜಗತ್ತಿಗೆ ಗೊತ್ತಾಗಿದೆ. ಹಾಗಾಗಿ ವೈದ್ಯಕೀಯ ರಂಗದಲ್ಲಿರುವವರ ವೃತ್ತಿ ಮಹತ್ವದ್ದಾಗಿದೆ. ಆ ವೃತ್ತಿಯ ಗೌರವವನ್ನು ಎತ್ತಿ ಹಿಡಿಯಬೇಕು ಎಂದು ಸಲಹೆ ನೀಡಿದರು.
ಎಲ್ಲ ರಂಗದಲ್ಲಿಯೂ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ಆ ಜ್ಞಾನವನ್ನು ಪಡೆದುಕೊಳ್ಳುವ ಜತೆಗೆ ಬಳಸುವುದನ್ನು ಕಲಿಯಬೇಕು ಎಂದರು.
ವಿದ್ಯಾರ್ಥಿ ಆಗಿದ್ದಾಗಲೇ ಮುಂದೆ ಯಾವ ಗುರಿಯತ್ತ ಸಾಗಬೇಕು ಎನ್ನುವುದನ್ನು ನಿರ್ಧರಿಸಬೇಕು. ಅದನ್ನು ಸಾಧಿಸಲು ಸತತ ಪರಿಶ್ರಮವೂ ಬೇಕು. ಈ ಹಾದಿಯ ಆರಂಭದಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದಾಗಿದ್ದು, ಅವುಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಮುಂದೆ ಸಾಗಬೇಕು ಎಂದು ತಿಳಿ ಹೇಳಿದರು.
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಡೀನ್ ಹಾಗೂ ನಿರ್ದೇಶಕ ಡಾ.ಎಚ್.ಜಿ.ಮಂಜುನಾಥ್ ಮಾತನಾಡಿ, ಪದವಿ ಪಡೆದಾಕ್ಷಣ ನಿಮ್ಮ ಕಲಿಕೆ ಮುಗಿಯಿತು ಎಂದು ಭಾವಿಸಬಾರದು. ಕಲಿಕೆ ಎನ್ನುವುದು ಪ್ರತಿನಿತ್ಯ ಇದ್ದು, ಹೊಸ, ಹೊಸ ವಿಷಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ವೈದ್ಯರಷ್ಟೇ ಮಹತ್ವದ ಪಾತ್ರವನ್ನು ನರ್ಸ್, ಅರೆ ವೈದ್ಯಕೀಯ ಸಿಬ್ಬಂದಿಯೂ ವಹಿಸುತ್ತಾರೆ. ಒಬ್ಬ ರೋಗಿಯನ್ನು ವೈದ್ಯರು ಪರೀಕ್ಷಿಸಿ ಚಿಕಿತ್ಸೆ ಸಲಹೆ ನೀಡಬಹುದು. ಆದರೆ ಅರೆ ವೈದ್ಯಕೀಯ ಸಿಬ್ಬಂದಿ ಶುಶ್ರೂಷೆ ಮಾಡಿ ರೋಗಿಯನ್ನು ಗುಣಪಡಿಸುವ ಜವಾಬ್ದಾರಿ ಹೊತ್ತಿರುತ್ತಾರೆ. ಹಾಗಾಗಿ ರೋಗಿಗಳನ್ನು ಕೇವಲ ರೋಗಿಗಳಾಗಿ ಕಾಣದೆ ಅವರನ್ನು ನಗು ಮೊಗದಿಂದ ವಿಶ್ವಾಸದಿಂದ ಮಾತನಾಡಿಸಿದರೆ ಅರ್ಧ ರೋಗಿ ಗುಣವಾದಂತೆ ಎಂದು ಸಲಹೆ ನೀಡಿದರು.
ಡಾ.ಚಂದ್ರಶೇಖರ್ ಫೌಂಡೇಷನ್ ಅಧ್ಯಕ್ಷ ಡಾ.ಜಿ.ಆರ್.ಚಂದ್ರಶೇಖರ್ ಮಾತನಾಡಿ, ನಮ್ಮ ಸಂಸ್ಥೆಯಿಂದ ಶಿಕ್ಷಣ ಪಡೆದು ಹೊರ ಹೋಗುತ್ತಿರುವವರಿಗೆ ಮುಂದಿನ ಹಾದಿ ಶುಭವಾಗಲಿ. ವೃತ್ತಿ ಬದುಕಿನಲ್ಲಿ ಯಶಸ್ಸು ಸಿಗಲಿ ಎಂದರು.
ವೃತ್ತಿ ಜೀವನದಲ್ಲಿ ಅನೇಕ ಸವಾಲುಗಳು ಬರಲಿದ್ದು, ಅವುಗಳನ್ನು ಎದುರಿಸಲು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ವೃತ್ತಿ ಹಾಗೂ ಬದುಕಿನಲ್ಲಿ ಯಶಸ್ಸು ಸಾಧ್ಯ. ಇದಕ್ಕೆ ಕೌಶಲ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾವೇರಿ ಸಮೂಹ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಅದ ಸುರಕ್ಷಾ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಡಾ.ಸರಳಾ ಚಂದ್ರಶೇಖರ್, ಕಾಲೇಜಿನ ಡೀನ್ ಪ್ರೊ.ಎಸ್.ಶ್ರೀಕಂಠಸ್ವಾಮಿ, ಸಂಸ್ಥೆಯ ಆರ್.ಎಂ. ಅರವಿಂದ, ಡಾ.ರಾಜ್‌ಕಣ್ಣನ್, ಡಾ.ಜೆ.ಲೀಲಾ ಇತರರು ಇದ್ದರು. ಸಂಸ್ಥೆಯ ವಿವಿಧ ವಿಭಾಗದಿಂದ 318 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಯಿತು.