ಗದಗ: ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ಭಾಗದಲ್ಲಿ ವಿಜಯಪುರದ ಆದಿಲ್ಷಾಹಿಗಳು, ಮರಾಠರು, ಪೇಶ್ವೆಗಳು, ಸಂಸ್ಥಾನಿಕರ ಆಡಳಿತದ ಅವಧಿಯಲ್ಲಿ ಸ್ಥಳೀಯವಾಗಿ ದೇಸಾಯಿ, ದೇಶಮುಖ, ನಾಡಗೌಡ ಮತ್ತು ಜಾಗೀರದಾರರು ವತನದಾರರಾಗಿ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಇವರ ಮನೆತನಗಳನ್ನೇ ದೇಸಗತಿಗಳು ಎಂದು ಕರೆಯಲಾಗುತ್ತಿತ್ತು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಲೋಕೇಶ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕರ್ನಾಟಕ ರಾಜ್ಯ ಪತ್ರಾಗಾರ ನಿರ್ದೇಶನಾಲಯದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗದಗ ಜಿಲ್ಲೆಯ ದೇಸಗತಿ ಮನೆತನಗಳು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಗದಗ ಜಿಲ್ಲೆಯ ಕಲಕೇರಿ, ಮುಳಗುಂದ, ಡಂಬಳ, ಕುರ್ತಕೋಟಿ, ಗಜೇಂದ್ರಗಡ, ಸವಣೂರ, ನರಗುಂದ, ರೋಣದಲ್ಲಿ ದೇಸಗತಿ ಮನೆತನಗಳಿವೆ ಎಂದರು.
ಇತಿಹಾಸ ಪ್ರಾಧ್ಯಾಪಕ ಮತ್ತು ವಿಚಾರ ಸಂಕಿರಣದ ಸಂಯೋಜಕ ಡಾ.ಅಪ್ಪಣ್ಣ ಹಂಜೆ ಮಾತನಾಡಿ, ಗದಗ ಜಿಲ್ಲೆಯಲ್ಲಿ ದೇಸಗತಿ ಮನೆತನಗಳ ಚರಿತ್ರೆ, ಅವುಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳ ಮಹತ್ವ, ಈ ಮನೆತನಗಳ ಸಾಂಸ್ಕೃತಿಕ ಕೊಡುಗೆಗಳ ಕುರಿತು ವಿವರಿಸಿದರು.
ಧಾರವಾಡದ ಪ್ರಾದೇಶಿಕ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಮತ್ತು ತಮ್ಮ ಗ್ರಾಮಗಳ ದೇಸಾಯಿಗಳು, ಗೌಡರು, ಮುತಾಲಿಕರು ಮೊದಲಾದ ಪಾರಂಪರಿಕ ಮನೆತನಗಳ ದಾಖಲೆ ಪತ್ರಗಳಿದ್ದರೆ ಅವುಗಳನ್ನು ಜೋಪಾನವಾಗಿ ಸಂರಕ್ಷಿಸಬೇಕು. ಅವುಗಳೇ ನಾಡಿನ ಮತ್ತು ಪ್ರದೇಶದ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಇತಿಹಾಸದ ಮಹತ್ವದ ಆಕರಗಳಾಗಿವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಫ್. ಸಿದ್ನೇಕೊಪ್ಪ ಮಾತನಾಡಿ, ಗದಗ ಜಿಲ್ಲೆಯ ದೇಸಗತಿ ಮನೆತನಗಳ ಚರಿತ್ರೆ ಮತ್ತು ಸಾಂಸ್ಕೃತಿಕ ಕೊಡುಗೆಗಳನ್ನು ವಸ್ತುನಿಷ್ಠವಾಗಿ ದಾಖಲೀಕರಣ ಮಾಡುವುದು ತುಂಬಾ ಅವಶ್ಯವಿದ್ದು, ಅವುಗಳ ವಾಡೆಗಳು ಸ್ಥಳೀಯ ವಾಸ್ತುಕಲೆಯ ಪ್ರತೀಕಗಳಾಗಿವೆ. ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಅವುಗಳ ಸಂರಕ್ಷಣೆ ಮತ್ತು ಅಧ್ಯಯನದ ಕಡೆಗೆ ಗಮನ ಹರಿಸಬೇಕು ಎಂದರು.
ಡಾ. ರಮೇಶಗೌಡ ಕಲ್ಲನಗೌಡರ ಅವರು ದಾಖಲೆ ಪತ್ರಗಳ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮಹತ್ವ ವಿಷಯ ಕುರಿತು ಮಾತನಾಡಿ, ಗದುಗಿನ ತೋಂಟದಾರ್ಯ ಮಠ, ಮುಂಡರಗಿಯ ಅನ್ನದಾನೀಶ್ವರ ಮಠ, ಕಲಕೇರಿಯ ದೇಸಾಯಿ ಮನೆತನದ ಕುರಿತು ಪ್ರಕಟವಾಗಿರುವ ದಾಖಲೆ ಪತ್ರಗಳ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮಹತ್ವದ ಕುರಿತು ಪ್ರಬಂಧ ಮಂಡಿಸಿದರು. ಡಾ. ಅಪ್ಪಣ್ಣ ಹಂಜೆ ಅವರು ಗದಗ ಜಿಲ್ಲೆಯ ದೇಸಗತಿ ಮನೆತನಗಳು ವಿಷಯದ ಕುರಿತು ಪ್ರಬಂಧ ಮಂಡಿಸಿ ಗದಗ ಜಿಲ್ಲೆಯ ದೇಸಗತಿ ಮನೆತನಗಳ ಚರಿತ್ರೆ ಮತ್ತು ಸಾಂಸ್ಕೃತಿಕ ಕೊಡುಗೆಗಳು, ಸ್ಥಳೀಯ ಆಡಳಿತದಲ್ಲಿ ಅವುಗಳ ಪಾತ್ರ, ಅವುಗಳ ವಾಡೆಗಳ ವಾಸ್ತುಕಲೆಯ ಕುರಿತು ಮಾತನಾಡಿದರು. ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಪಿ.ಕೆ. ಇಂಗಲಗೊಂಡಿ ಸ್ವಾಗತಿಸಿದರು. ಪ್ರೊ.ಕೆ.ಎಂ. ಬೆಂತೂರ ವಂದಿಸಿದರು. ಪ್ರಾಧ್ಯಾಪಕರಾದ ಪ್ರೊ.ಎಸ್.ಎಲ್. ಗುಳೇದಗುಡ್ಡ, ಪ್ರೊ. ಹನುಮಂತಗೌಡ ಕಲ್ಮನಿ, ಇತರರಿದ್ದರು.