ನಂಜನಗೂಡು: ವಿದ್ಯೆಗಿಂತ ಮೊದಲು ವಿವೇಕ ಮುಖ್ಯ. ಅಂತೆಯೇ ಸಂಸ್ಕಾರ ಎನ್ನುವುದು ಹೇಳಿಕೊಟ್ಟು ಕಲಿಸುವ ವಿದ್ಯೆಯಲ್ಲ. ಬದಲಾಗಿ ನಾವೇ ಅದನ್ನು ಮೈಗೂಡಿಸಿಕೊಳ್ಳಬೇಕು ಎಂದು ರಾಜ್ಯ ಸಂಪನ್ಮೂಲ ಶಿಕ್ಷಕ ಬಾಲಕೃಷ್ಣ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಿರಿಗನ್ನಡ ವೇದಿಕೆಯ 8ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆಯನ್ನು ಸರಿ ದಾರಿಗೆ ಕರೆತರುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ. 13 ರಿಂದ 19 ವಯಸ್ಸಿನ ಮಕ್ಕಳ ಮೇಲೆ ಪಾಲಕರು ಹೆಚ್ಚಿನ ನಿಗಾ ವಹಿಸಬೇಕು. ಈ ವಯಸ್ಸಿನಲ್ಲಿ ಮಕ್ಕಳಿಗೆ ಮೌಲ್ಯ ಹೇಳಿಕೊಟ್ಟರೆ ಅದು ಅವರನ್ನು ಜೀವನಪರ್ಯಂತ ಕಾಯುತ್ತದೆ ಎಂದರು.
ಸಿಎಫ್‌ಟಿಆರ್‌ಐ ವಿಜ್ಞಾನಿ ಕೃಷ್ಣಮೂರ್ತಿ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬುದನ್ನು ಮೊದಲು ತಿಳಿಯಬೇಕು. ಜತೆಗೆ ಉಪವಾಸ ಮಾಡುವುದನ್ನು ಮೈಗೂಡಿಸಿಕೊಳ್ಳಬೇಕು. ಎರಡು ಬಗೆಯ ಅಡುಗೆ ಎಣ್ಣೆಯನ್ನು ಉಪಯೋಗಿಸಿ ಅಡುಗೆ ಮಾಡುವುದು ಒಳ್ಳೆಯದು. ಬೀದಿ ಬದಿಯ ಆಹಾರ ಆರೋಗ್ಯಕ್ಕೆ ಹಾನಿಕಾರಕ ಎಂದರು.
ಕಾರ್ಯಕ್ರಮದಲ್ಲಿ ವೇದಿಕೆ ಗೌರವಾಧ್ಯಕ್ಷರಾದ ಡಾ.ಸೌಗಂಧಿಕ ಜೋಯಿಸ್, ಚೇತನ್ ಶರ್ಮ, ಶೋಭಾ ನಾಗಶಯನ, ಸುಧಾಮಣಿ ಗಣೇಶ್, ನಂಜನಗೂಡು ಸತ್ಯನಾರಾಯಣ, ಶ್ರೀಕಾಂತ್, ರವಿಶಂಕರ್, ಶ್ರೀನಿವಾಸ್, ಮಹೇಶ್, ಲಿಂಗಣ್ಣಯ್ಯ ಇದ್ದರು.