ಜಿಲ್ಲೆ

ಸಸ್ಯ ಸಂಕುಲ ಉಳಿಸುವ ಕಾರ್ಯವಾಗಲಿ

ಬಸವರಾಜ ವೀರಪ್ಪ ಗರಗ

ಬ್ಯಾಡಗಿ: ಪರಿಸರ ನಾಶದಿಂದ ಪ್ರಕೃತಿ ಹಾನಿ ಅನುಭವಿಸುತ್ತಿದ್ದು, ಮಾನವ ಕುಲಕ್ಕೆ ದೊಡ್ಡ ಆತಂಕದ ವಿಚಾರವಾಗಿದೆ. ಪ್ರತಿಯೊಬ್ಬರೂ ಸಸ್ಯ ಸಂಕುಲ ಉಳಿಸುವ ಮೂಲಕ ಸಂಪೂರ್ಣ ಪರಿಸರ ಕಾಪಾಡಬೇಕಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಪಟ್ಟಣದ ತಾಪಂ ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ವನಮಹೋತ್ಸವಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಆಧುನಿಕ ಬೆಳವಣಿಗೆ ನೆಪದಲ್ಲಿ ಪರಿಸರ ನಾಶದ ಅಟ್ಟಹಾಸಕ್ಕೆ ಜೀವಸಂಕುಲ ನಲುಗಿ ಹೋಗುತ್ತಿದೆ. ಮುಂದೊಮ್ಮೆ ದೊಡ್ಡ ಮಟ್ಟದಲ್ಲಿ ಸಮಸ್ಯೆ ಎದುರಿಸುವ ದಿನ ಬರಬಹುದಾಗಿದ್ದು, ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಸ್ವಯಂ ಪ್ರೇರಿತರಾಗಿ ಸಸಿ ನೆಟ್ಟು ಪೋಷಣೆ ಮಾಡಬೇಕು ಎಂದರು.

ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ ಮಾತನಾಡಿ, ಕಳೆದ ಕೆಲ ವರ್ಷಗಳಿಂದ ಹೆಚ್ಚುತ್ತಿರುವ ತಾಪಮಾನ ಮನುಷ್ಯನ ವಿನಾಶದ ಸೂಚನೆ ನೀಡುತ್ತಿದೆ. ಪರಿಸರ ಇಷ್ಟೆಲ್ಲ ಸೂಚನೆಗಳನ್ನು ನೀಡಿದರೂ ನಾವು ಬದಲಾಗುತ್ತಿಲ್ಲ. ಅರಣ್ಯ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಎಲ್ಲೆಡೆ ಜಾಗೃತಿ ಮೂಡಿಸಬೇಕಿದೆ. ಶಾಲಾ, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವುದು ಅಗತ್ಯವಾಗಿದೆ ಎಂದರು.

ತಾಪಂ ಇಒ ಮಲ್ಲಿಕಾರ್ಜುನ ಕೆ.ಎಂ., ವ್ಯವಸ್ಥಾಪಕ ಪ್ರಕಾಶ ಹಿರೇಮಠ, ಅರಣ್ಯಾಧಿಕಾರಿ ಕೆ. ಅಣ್ಣಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎನ್. ತಿಮ್ಮಾರೆಡ್ಡಿ, ಅಬ್ದುಲ್​ವುುನಾಫ್ ಏರೇಶಿಮಿ, ನಾಗರಾಜ ಆನ್ವೇರಿ, ಖಾದರಸಾಬ್ ದೊಡ್ಡಮನಿ, ಮಂಜುನಾಥ ಬೋವಿ, ಲಕ್ಷ್ಮೀ ಜಿಂಗಾಡೆ, ಗಿರೀಶ ಇಂಡಿಮಠ, ಇತರರಿದ್ದರು.