ಕಾರ್ಯಕ್ರಮದಲ್ಲಿ ಅಧಿಕಾರಿಗಳು ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.  
ಜಿಲ್ಲೆ

ಪ್ರಾರ್ಥನೆ ಸಮಯದಲ್ಲಿ ವಾಚಿಸುವಂತಾಗಲಿ

ಅಭಿನಯ್ ಎಚ್.ಎಂ

ಹನೂರು: ಪ್ರತಿ ಶಾಲೆಯಲ್ಲಿ ಪ್ರಾರ್ಥನೆ ಸಮಯದಲ್ಲಿ ಸಂವಿಧಾನದ ಪೀಠಿಕೆಯನ್ನು ವಾಚಿಸುವುದರ ಜತೆಗೆ ಅದರ ಆಶಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಗುರುಪ್ರಸಾದ್ ಸಲಹೆ ನೀಡಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಪಟ್ಟಣದ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವದಲ್ಲೇ ಬೃಹತ್ ಸಂವಿಧಾನ ಹೊಂದಿರುವ ನಮ್ಮ ದೇಶ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ಒಳಗೊಂಡಿದೆ. ದೇಶದ ಪ್ರತಿ ಪ್ರಜೆಯೂ ಸಂವಿಧಾನವನ್ನು ಪಾಲಿಸಬೇಕಾಗಿದೆ. ಕರ್ತವ್ಯಗಳ ಜತೆಗೆ ಕಾನೂನಿನ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಅದು ತಿಳಿಸುತ್ತದೆ ಎಂದರು.
ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಸಂವಿಧಾನಿಕ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸಂವಿಧಾನ ಪೀಠಿಕೆಯನ್ನು ವಾಚಿಸಲಾಗುತ್ತಿದೆ ಎಂದರು.

ಪಟ್ಟಣದ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಅಧಿಕಾರಿಗಳ ಜತೆಗೂಡಿ ಸಾಮೂಹಿಕವಾಗಿ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದಕ್ಕೂ ಮುನ್ನ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕುಸಿದು ಬಿದ್ದ ವಿದ್ಯಾರ್ಥಿನಿ: ಸಂವಿಧಾನ ಪೀಠಿಕೆ ವಾಚಿಸುವ ವೇಳೆ ಪಟ್ಟಣದ ಬಿಎಂಜಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪ್ರಜ್ಞೆತಪ್ಪಿ ಕುಸಿದು ಬಿದ್ದಳು. ಕೂಡಲೇ ಸ್ಥಳದಲ್ಲಿದ್ದ ಶಿಕ್ಷಕರು ಆಕೆಯನ್ನು ಕೊಠಡಿಗೆ ಕರೆದೊಯ್ದರು. ಕೆಲಕಾಲ ವಿಶ್ರಾಂತಿ ಪಡೆದ ಬಳಿಕ ಶಾಲೆಗೆ ಕರೆದೊಯ್ಯಲಾಯಿತು.
ತಾಪಂ ಇಒ ಉಮೇಶ್, ಸಹಾಯಕ ನಿರ್ದೇಶಕ ರವೀಂದ್ರ, ಶಿರಸ್ತೆದಾರ್ ನಾಗೇಂದ್ರ, ಆರ್‌ಐ ಮಹದೇವಸ್ವಾಮಿ, ಗ್ರಾಮ ಆಡಳಿತ ಅಧಿಕಾರಿಗಳಾದ ಶೇಷಣ್ಣ, ಕಾರ್ತಿಕ್, ತಾಲೂಕು ಪಶು ವೈದ್ಯಾಧಿಕಾರಿ ಡಾ.ಸಿದ್ದರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಮಹದೇವ, ಶಿಕ್ಷಣ ಸಂಯೋಜಕರಾದ ಕಂದವೇಲು, ಕಿರಣ್‌ಕುಮಾರ್, ಚಿನ್ನಪ್ಪಯ್ಯ, ಸಿಆರ್‌ಪಿ ದೇವರಾಜು, ವಿವಿಧ ಶಾಲೆಯ ಶಿಕ್ಷಕರು ಹಾಗೂ ಕಂದಾಯ ಇಲಾಖೆ ನೌಕರರು ಭಾಗವಹಿಸಿದ್ದರು.