ಜಿಲ್ಲೆ

ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳುವ ಜವಾಬ್ದಾರಿ ಎಲ್ಲರದಾಗಲಿ

ಬಸವರಾಜ ವೀರಪ್ಪ ಗರಗ

ಶಿಗ್ಗಾಂವಿ: ಮನುಷ್ಯ ಕೇವಲ ಉತ್ತಮ ಪ್ರಜೆಯಾದರೆ ಸಾಲದು, ಉತ್ತಮ ನಾಗರಿಕನಾಗಿ ಜೀವನದಲ್ಲಿ ಒಳ್ಳೆಯ ಸಂಸ್ಕಾರ ಪಡೆದು ಬಾಳಿದಾಗ ಆತನ ವ್ಯಕ್ತಿತ್ವ ಸಮಾಜಕ್ಕೆ ಆದರ್ಶವಾಗುತ್ತದೆ. ಅಂತಹ ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳುವ ಹೊಣೆಗಾರಿಕೆ ಮತ್ತು ಜವಾಬ್ದಾರಿ ಪ್ರತಿಯೊಬ್ಬರದಾಗಬೇಕು ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ನಾರಾಯಣಪುರದಲ್ಲಿ ಉದಯಕುಮಾರ ದ್ಯಾಮನಕೊಪ್ಪ ಅವರ ಜನ್ಮ ದಿನದ ನಿಮಿತ್ತ ಏರ್ಪಡಿಸಿದ್ದ 25 ಜೋಡಿ ದಂಪತಿಗಳಿಗೆ ಆದರ್ಶ ಶರಣ ದಂಪತಿ ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು. ಜನ್ಮದಿನ ಆಚರಣೆ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ ಹಾಗೂ ಪರಂಪರೆಗಳನ್ನು ಪುನರುತ್ಥಾನಗೊಳಿಸುವಂತಿರಬೇಕು ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಸಂಸದ ಮಂಜುನಾಥ ಕುನ್ನೂರ ಅವರು ಇದೊಂದು ವಿನೂತನ ಕಾರ್ಯಕ್ರಮವಾಗಿದೆ. ಮಾನವೀಯ ಸಂಬಂಧಗಳ ಕೊಂಡಿ ಕಳಚುತ್ತಿರುವ ಇಂದಿನ ದಿನಮಾನಗಳಲ್ಲಿ ಇಂಥ ಕಾರ್ಯಕ್ರಮಗಳು ಮನುಷ್ಯ ಸಂಬಂಧಗಳನ್ನು ಬೆಸೆಯುತ್ತವೆ ಎಂದು ಅಭಿಪ್ರಾಯಪಟ್ಟರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ ಶಾಸ್ತ್ರಿ ಮಾತನಾಡಿ, ಎಲ್ಲರಿಗೂ ಆಶೀರ್ವಾದ ಮತ್ತು ಆಶ್ರಯ ಸಿಗುವುದು ದುರ್ಲಭದ ಸಂಗತಿ. ಅದೃಷ್ಟವಶಾತ್ ಅವೆರಡು ದೊರೆತಾಗ ಅದನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸಾಧನೆಯ ಗುರಿ ಮುಟ್ಟಬೇಕು ಎಂದರು.

ಮಾತೋಶ್ರೀ ಶಾಂತವ್ವ ಗೂಳಪ್ಪ ದ್ಯಾಮನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಣುಕಾ ಕೊರಡೂರ, ಎಸ್.ಎಸ್. ನಿಸ್ಸೀಮಗೌಡರ, ಪ್ರಕಾಶ ಬಾರಕೇರ, ಸಾವಿತ್ರಿ ದ್ಯಾಮನಕೊಪ್ಪ, ಡಾ. ಲತಾ ನಿಡಗುಂದಿ ಹಾಗೂ ಪ್ರತಿಭಾ ಗಾಂಜಿ, ಇತರರಿದ್ದರು.

ಇದೇ ಸಂದರ್ಭದಲ್ಲಿ 25 ಜೋಡಿ ದಂಪತಿಗಳಿಗೆ ಆದರ್ಶ ಶರಣ ದಂಪತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾಂಚನಾ ದ್ಯಾಮನಕೊಪ್ಪ, ಅರ್ಪಿತಾ ಮರಗಿ ಹಾಗೂ ಪ್ರೊ. ಶಿವಪ್ರಕಾಶ ಬಳಿಗಾರ ಕಾರ್ಯಕ್ರಮ ನಿರ್ವಹಿಸಿದರು.