ಜಿಲ್ಲೆ

ಕನ್ನಡದಲ್ಲಿಯೇ ವ್ಯವಹರಿಸುವಂತಾಗಲಿ

ಅವಿನಾಶ್ ಜೈನಹಳ್ಳಿ

ಮೈಸೂರು: ರಾಜ್ಯದಲ್ಲಿರುವ ಸಂಸ್ಥೆಗಳಲ್ಲಿ ಕನ್ನಡದಲ್ಲಿಯೇ ವ್ಯವಹರಿಸಬೇಕು. ಇಲ್ಲಿ ಬಂದವರಿಗೆ ನಿರ್ದಿಷ್ಟಾವಧಿಯಲ್ಲಿ ಕನ್ನಡ ಕಲಿಸಬೇಕು ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಹೇಳಿದರು.

ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಈ ಮೂಲಕ ಸ್ಥಳೀಯರಿಗೆ ಎಲ್ಲ ಸೌಲಭ್ಯಗಳು ಕನ್ನಡದಲ್ಲಿಯೇ ಸಿಗುವಂತಾಗಬೇಕು ಎಂದು ತಿಳಿಸಿದರು.

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗದ ಭರವಸೆ ಇಲ್ಲವಾಗಿದೆ. ಇಂಗ್ಲಿಷ್ ಹಾಗೂ ಹಿಂದಿಗೆ ಪ್ರಾಧಾನ್ಯತೆ ನೀಡಲಾಗಿದೆ. ಈ ತಪ್ಪು ಕಲ್ಪನೆಗಳನ್ನು ಆಳುವ ಸರ್ಕಾರ ಹೋಗಲಾಡಿಸಬೇಕು. ಕರ್ನಾಟಕದಲ್ಲಿ ಸ್ಥಾಪನೆಯಾಗುವ ಉದ್ಯಮಗಳು, ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಮುಂದಿನ ವರ್ಷದಿಂದ ರಾಜ್ಯೋತ್ಸವವನ್ನು ವಿಶ್ವವಿದ್ಯಾಲಯದಿಂದಲೇ ಆಚರಿಸಲಾಗುವುದು ಎಂದು ಭರವಸೆ ನೀಡಿದರು.

ಸಂಸ್ಥೆ ನಿರ್ದೇಶಕಿ ಪ್ರೊ.ವಿಜಯಕುಮಾರಿ ಎಸ್.ಕರಿಕಲ್, ಪ್ರಾಧ್ಯಾಪಕರಾದ ಪ್ರೊ.ಎನ್.ಕೆ.ಲೋಲಾಕ್ಷಿ, ಪ್ರೊ.ನಂಜಯ್ಯ ಹೊಂಗನೂರು, ಪ್ರೊ.ಬಿ.ಕೆ.ರವೀಂದ್ರನಾಥ, ಪ್ರೊ.ಎಸ್.ಡಿ.ಶಶಿಕಲಾ ಇದ್ದರು.