ಜಿಲ್ಲೆ

ಒಳಪಂಗಡ ಒಂದುಗೂಡಿಸುವ ಪ್ರಯತ್ನವಾಗಲಿ

ಹುಬ್ಬಳ್ಳಿ: ವೀರಶೈವ ಲಿಂಗಾಯತ ಸಮುದಾಯ ಒಂದಾಗಬೇಕು. ಎಲ್ಲ ಒಳಪಂಗಡ ಒಂದುಗೂಡಿಸುವ ಪ್ರಯತ್ನ ನಾವೆಲ್ಲರೂ ಮಾಡಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ವೀರಶೈವ ಸಂಘಟನಾ ಸಮಿತಿ, ಧಾರವಾಡ ಜಿಲ್ಲಾ ವೀರಶೈವ ಲಿಂಗಾಯತ ಸಂಘಟನೆ, ವೀರಶೈವ ಲಿಂಗಾಯತ ಅಭಿವೃದ್ಧಿ ಸಂಘ, ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಸಂಸ್ಥೆ, ಆನಂದನಗರ ವೀರಶೈವ ಸಮಾಜ ಸಂಘಟನಾ ಸೇವಾ ಸಮಿತಿ ಆಶ್ರಯದಲ್ಲಿ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜದಲ್ಲಿ ಒಗ್ಗಟ್ಟಿಲ್ಲದ ಕಾರಣ ರಾಜಕೀಯವಾಗಿ ಹಿಂದುಳಿದಿದೆ. ಒಗ್ಗಟ್ಟು ಪ್ರದರ್ಶಿಸುವ ಕಾರ್ಯ ಹಾಗೂ ಜಾಗೃತಿ ಸಂಘಟನೆಗಳಿಂದಾಗಬೇಕು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುವ ಕಾರ್ಯ ಸಂಘಟನೆಗಳಿಂದಾಗಬೇಕು. ಈ ಹಿಂದೆ ಜಾತಿ ಸಮೀಕ್ಷೆಯಲ್ಲಿ ಶೇ. 10ರಷ್ಟು ಲಿಂಗಾಯತ ಸಮಾಜ ತೋರಿಸಿದ್ದರಿಂದ ಆ ಸಮೀಕ್ಷೆ ವರದಿ ಬಹಿರಂಗ ಮಾಡಿಲ್ಲ. ಇದರಲ್ಲಿ ಸಮಾಜ ಒಡೆಯುವ ಕಾರ್ಯವಿದೆ. ವಸ್ತು ಸ್ಥಿಯಿಂದ ವೀರಶೈವ ಲಿಂಗಾಯತ ಮಹಾಸಭಾದಿಂದ ಸರ್ವೇ ಮಾಡುವ ಕಾರ್ಯವಾಗಬೇಕು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಎಲ್ಲರನ್ನೂ ಸೇರಿಸಿ ಇಡೀ ಸಮುದಾಯದವರು ಒಂದೆಬ ಸಂದೇಶ ನೀಡಿದ್ದಾರೆ. ಅದೇ ರೀತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಂಘಟನೆಗಳು ಮಾಡಿವೆ. ಅಂಕ ಗಳಿಸುವ ಗೀಳಿನಿಂದ ಮನೆ ಮಕ್ಕಳನ್ನು ಅಲ್ಲಗಳೆಯುವುದು ಬೇಡ. ಪ್ರಪಂಚ ವಿಶಾಲವಾಗಿದ್ದು, ತಮಗಿಷ್ಟವಾದ ಕ್ಷೇತ್ರದಲ್ಲಿ ಬೆಳೆಯಲು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಇಂದಿನ ಸ್ಥಿತಿಗತಿ ನೋಡಿದರೆ ವೀರಶೈವ ಲಿಂಗಾಯತ ಸಮಾಜ ಅಲ್ಪಸಂಖ್ಯಾತರಾದರೂ ಆಶ್ಚರ್ಯ ಪಡಬೇಕಿಲ್ಲ. ಜಾತಿ ಪ್ರಮಾಣಪತ್ರದಲ್ಲಿ ಒಳಪಂಗಡಗಳ ಹೆಸರು ನಮೂದಿಸುತ್ತಿದ್ದಾರೆ. ಇಂತಹ ಅವಕಾಶಕ್ಕೆ ಯಾರೂ ಆಸ್ಪದ ನೀಡಬಾರದು. ಇಡೀ ಸಮಾಜ ಒಗ್ಗಟ್ಟಾಗಿ ಹೋಗಬೇಕಿದೆ ಎಂದರು.
ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಲಿಂಗರಾಜ ಹೊರಕೇರಿ, ಶರಣಪ್ಪ ಕೊಟಗಿ, ಮೀನಾಕ್ಷಿ ಒಂಟಮೂರಿ, ಮಲ್ಲಿಕಾರ್ಜುನ ಸಾವಕಾರ, ವಿನಯ ಸಜ್ಜನರ, ಪ್ರಕಾಶ ಬೆಂಡಿಗೇರಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಸದಾಶಿವ ಚೌಶೆಟ್ಟಿ, ಮಹೇಶ ಚಂದ್ರಗಿ, ಬಸವರಾಜ ಹೊಸಮನಿ, ಮುರುಗೇಶ ಶೆಟ್ಟರ್, ರತ್ನಾ ಚೌಶೆಟ್ಟಿ ಇತರರು ಇದ್ದರು.