ಜಿಲ್ಲೆ

ಯುವಕರಲ್ಲಿ ಕ್ರೀಡಾಸಕ್ತಿ ತುಂಬುವ ಕಾರ್ಯವಾಗಲಿ

ಹಾನಗಲ್ಲ: ಬದಲಾದ ಕಾಲದಲ್ಲಿ ಯುವಕರ ಚಿಂತನೆಗಳು ಬದಲಾಗುತ್ತಿದ್ದು, ಕ್ರೀಡೆಯತ್ತ ಅವರ ಒಲವು ಬೆಳೆಯುತ್ತಿಲ್ಲ, ಆರೋಗ್ಯವನ್ನು ಕಾಪಾಡುವ ಕ್ರೀಡಾ ಚಟುವಟಿಕೆಗಳನ್ನು ಯುವಕರ ಮನದಲ್ಲಿ ತುಂಬುವ ಕಾರ್ಯವಾಗಬೇಕು ಎಂದು ಪುರಸಭೆ ಅಧ್ಯಕ್ಷೆ ಮಮತಾ ಆರೇಗೊಪ್ಪ ಹೇಳಿದರು.

ಪಟ್ಟಣದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚೆಗೆ ಜನಪದ ಆಟಗಳು ಮಾಯವಾಗಿವೆ. ಈಗ ಆಧುನಿಕ ಆಟಗಳಿಂದಲೂ ಯುವಕರು ದೂರ ಸರಿಯುತ್ತಿದ್ದಾರೆ. ಮೊಬೈಲ್​ಫೋನ್​ನಲ್ಲಿ ಮುಳುಗಿರುವ ಯುವಕರಿಗೆ ಒಳ್ಳೆಯ ಹವ್ಯಾಸಗಳತ್ತ ಮನಸು ಹರಿಯುತ್ತಿಲ್ಲ. ಕ್ರೀಡೆಗಳಿಗೆ ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಆದರೆ, ಅದರ ಸದ್ಬಳಕೆಗೆ ಯುವಕರು ಮುಂದಾಗಬೇಕಿದೆ ಎಂದರು.

ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ ಮಾತನಾಡಿ, ಶಾಲಾ-ಕಾಲೇಜು ಹಂತದಲ್ಲಿಯೇ ಯುವ ಪ್ರತಿಭೆಗಳನ್ನು ಬೆಳೆಸಲು ಇಂಥ ಅವಕಾಶಗಳನ್ನು ಸೃಷ್ಟಿಸಬೇಕಿದೆ. ಸಾರ್ವಜನಿಕವಾಗಿ ಕ್ರೀಡೆ ಪ್ರೋತ್ಸಾಹಿಸಲು ದಸರಾ ಕ್ರೀಡಾಕೂಟ ಹೆಚ್ಚು ಸಹಕಾರಿಯಾಗಿದೆ ಎಂದರು.

ಅಧ್ಯಕ್ಷತೆವಹಿಸಿದ್ದ ಬಿಇಒ ವಿ.ವಿ. ಸಾಲಿಮಠ ಮಾತನಾಡಿ, ಸತತ ಪರಿಶ್ರಮದಿಂದ ಮಾತ್ರ ಎಲ್ಲವನ್ನೂ ಸಾಧಿಸಲು ಸಾಧ್ಯ. ಸಾಧಿಸುವ ಇಚ್ಛಾಶಕ್ತಿ ಯುವಕರಲ್ಲಿರಬೇಕು ಎಂದರು.

ರಾಜೇಶ ಗುಡಿ, ಸಂತೋಷ ದೊಡ್ಡಮನಿ, ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕಿ ಜರಾಲ್ಡ ಡಿಸೋಜ, ಮಾರುತಿ ಶಿಡ್ಲಾಪೂರ, ಲಕ್ಷ್ಮಣ ಉಗಲವಾಟ, ವಿನಾಯಕ ಕಳಸೂರ, ಎಚ್.ಎನ್. ಗೂಳಪ್ಪನವರ, ಗೌರಮ್ಮ ಕೊಂಡೋಜಿ, ಬಿ.ಎನ್. ದಿಡಗೂರ, ಪೀರಪ್ಪ ಸಿರ್ಸಿ, ಫಕೀರೇಶ ಗೋಡಳ್ಳಿ, ಸಾಗರ ಸರ್ವದೆ, ಆರ್.ಎಸ್. ಹಿರೇಮಠ, ರಮೇಶ ಮಡಿವಾಳರ, ಪಂಚಾಕ್ಷರಿ ಚಿಕ್ಕೇರಿ, ಇತರರಿದ್ದರು.