ನಾವಲಗಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ಬಯಲಾಟ ಸಮ್ಮೇಳನಕ್ಕೆ ಹಿರಿಯ ಸಾಹಿತಿ ಸಿದ್ದರಾಜ ಪೂಜಾರಿ ಚಾಲನೆ ನೀಡಿದರು. ಶ್ರೀಶೈಲಯ್ಯ ಹಿರೇಮಠ, ಪ್ರೊ. ಕೆ.ಆರ್. ದುರ್ಗದಾಸ, ಮಲ್ಲಪ್ಪ ಗಣಿ, ಶ್ರೀಶೈಲ ಪಟ್ಟಣಶೆಟ್ಟಿ ಇದ್ದರು. 
ಜಿಲ್ಲೆ

ಕಲಾವಿದರ ಪ್ರೋತ್ಸಾಹಿಸುವ ಕಾರ್ಯವಾಗಲಿ

ರಬಕವಿ/ಬನಹಟ್ಟಿ: ಆಧುನಿಕ ಯುಗದಲ್ಲಿ ಗ್ರಾಮೀಣ ಸೊಗಡಿನ ಬಯಲಾಟ ಕಲಾವಿದರನ್ನು ಉಳಿಯಲು ಸರ್ಕಾರ ಮುಂದಾಗಬೇಕು ಎಂದು ತಾಲೂಕಿನ ಹಿರಿಯ ಸಾಹಿತಿ ಸಿದ್ದರಾಜ ಪೂಜಾರಿ ಹೇಳಿದರು.

ತಾಲೂಕಿನ ನಾವಲಗಿ ಗ್ರಾಮದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಬಯಲಾಟ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಾವಿದರ ಮಾಸಾಶನ ವಯೋಮಿತಿಯನ್ನು ಪರಿಶೀಲಿಸಬೇಕು ಎಂದರು.

ಕಲೆಗಳು ಜೀವಂತವಾಗಿದ್ದರೆ ಮಾತ್ರ ಸಮಾಜ ಜೀವಂತವಾಗಿರಲು ಸಾಧ್ಯ. ಆದ್ದರಿಂದ ಸರ್ಕಾರ ಕಲಾವಿದರನ್ನು ಗೌರವಿಸುವ ಕಾರ್ಯ ಮಾಡಬೇಕು. ಅಕಾಡೆಮಿಯವರು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ. ಮಾಸಾಶನವನ್ನು ಕಲಾವಿದರ ಮನೆ ಬಾಗಿಲಿಗೆ ಹೋಗಿ ತಲುಪಿಸುವಂತಹ ಯೋಜನೆ ಜಾರಿಗೆ ತರಬೇಕು ಎಂದರು.

ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ ಕೆ.ಆರ್.ದುರ್ಗದಾಸ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಜಾನಪದ ಕಲೆಯು ನಶಿಸಿ ಹೋಗುತ್ತಿರುವುದು ಬೇಸರ ತಂದಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಕಲಾವಿದರು ಕಲೆಯನ್ನು ಇನ್ನೂ ಜೀವಂತವಾಗಿಟ್ಟಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಆಕಾಡೆಮಿಯ ವತಿಯಿಂದ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದರು.

ಶ್ರೀಶೈಲಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಗ್ರಾಮದ ಹಿರಿಯರಾದ ಲಕ್ಷ್ಮಣ ದೇಸಾರಟ್ಟಿ, ಹಿರಿಯ ಕಲಾವಿದರಾದ ಲಕ್ಷ್ಮಿಬಾಯಿ ಬರಗಾಲ, ಡಾ.ಎಚ್. ಎಚ್. ನದ್ಾ, ಹನುಮಂತ ಭಿ. ಸವದಿ, ದಾನಪ್ಪ ಆಸಂಗಿ, ಮಲ್ಲಪ್ಪ ಗಣಿ, ಶ್ರೀಶೈಲ ಪಟ್ಟಣಶೆಟ್ಟಿ, ವಿಠ್ಠಲ ದ್ಯಾವಣ್ಣವರ, ಹನುಮಂತ ಬರಗಾಲ, ಶ್ರೀಶೈಲ ಗಣಿ, ಜೀವಪ್ಪ ಬಡಿಗೇರ, ನಿಂಗಪ್ಪ ಕಾಂತಿ, ಕಾಶಪ್ಪ ನಾಯಕ ಮತ್ತಿತರರಿದ್ದರು.