ಜಿಲ್ಲೆ

ಐಟಿ, ಬಿಟಿ ಕಂಪನಿಗಳು ಬೆಂಗಳೂರಿನಲ್ಲೇ ಉಳಿಯಲಿ: ಸಿದ್ದರಾಮಯ್ಯ ಸಲಹೆ


ಮೈಸೂರು:
ಬೆಂಗಳೂರಿನಲ್ಲಿ ಐಟಿ, ಬಿಟಿ ಕಂಪನಿಗಳಿಗೆ ಮೂಲಸೌಕರ್ಯ ಒದಗಿಸಿ, ಕಂಪನಿಗಳು ಬೆಂಗಳೂರಿನಲ್ಲಿಯೇ ಉಳಿಯುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ, ಬಿಟಿ ಅವರಿಗೆ ಸರಿಯಾದ ಮೂಲಸೌಕರ್ಯ ಬೇಕು. ಈ ಸರ್ಕಾರದವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದಾಗಿ ಐಟಿ, ಬಿಟಿ ಕಂಪನಿಗಳು ಬೇರೆಡೆ ಹೋಗುತ್ತವೆ. ಸರ್ಕಾರ ಇತ್ತ ಕಡೆ ಗಮನಹರಿಸಿ, ಕಂಪನಿಗಳು ಬೇರೆಡೆ ಹೋಗದಂತೆ ನೋಡಿಕೊಳ್ಳಬೇಕು ಎಂದರು.


ಬೆಂಗಳೂರಿನಲ್ಲಿ ಕೆರೆ, ರಾಜಕಾಲುವೆ ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆ. ಆದ್ದರಿಂದ ಬೆಂಗಳೂರಿನಲ್ಲಿ ಮಳೆಯಿಂದ ಹೆಚ್ಚು ಹಾನಿಯಾಗುತ್ತಿದೆ. ಸರ್ಕಾರ ಇತ್ತ ಗಮನಹರಿಸಬೇಕು. ಸರ್ಕಾರದ ವೈಫಲ್ಯವೂ ಈ ಅವಾಂತರಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಬೆಂಗಳೂರಿನ ಕೆರೆ, ರಾಜಕಾಲುವೆ ಒತ್ತುವರಿ ಮಾಡಿ ಮನೆ ಕಟ್ಟಿರುವುದರಿಂದ ಮನೆ, ರಸ್ತೆಗಳಿಗೆ ನೀರು ನುಗ್ಗುತ್ತಿದೆ. ನಮ್ಮ ಸರ್ಕಾರ ಇದ್ದಾಗ ರಾಜಕಾಲುವೆ ಒತ್ತುವರಿ ತೆರವಿಗೆ ಚಾಲನೆ ಕೊಟ್ಟಿದ್ದೆವು. ಬಿಜೆಪಿ ಅಧಿಕಾರಕ್ಕೆ ಬಂದು ಮೂರೂವರೆ ವರ್ಷವಾದರೂ ಏನೂ ಮಾಡಲಿಲ್ಲ ಎಂದು ದೂರಿದರು.


ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ವಿಚಾರ ಕುರಿತು ಮಾತನಾಡಿ, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಂಗ ತೀರ್ಪು ಮರುವಿಮರ್ಶೆಗೆ ಮಹಾರಾಷ್ಟ್ರದವರು ಕೇಳಿದ್ದಾರೆ. ನಮ್ಮ ಸರ್ಕಾರದವರೂ ಸಿದ್ಧತೆ ಮಾಡಿಕೊಂಡಿದ್ದಾರೆ. ಮಹಾಜನ್ ಯಾವ ರಾಜ್ಯದವರು? ಮಹಾರಾಷ್ಟ್ರದವರೇ ಅಲ್ಲ. ಅವರ ವರದಿಯೇ ಅಂತಿಮ ಎಂದು ಹೇಳಿದರು.
ಮೈಸೂರು ಮೇಯರ್ ಚುನಾವಣೆ ವಿಚಾರವಾಗಿ ನನಗೆ ಗೊತ್ತಿಲ್ಲ. ಸ್ಥಳೀಯ ನಾಯಕರು ಯಾವ ತೀರ್ಮಾನ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಇಲ್ಲ ಎಂದರು.