ಜಿಲ್ಲೆ

ಹೊಸತನದ ಸಂಶೋಧನೆಗಳು ನಡೆಯುವಂತಾಗಲಿ

ಬಸವರಾಜ ವೀರಪ್ಪ ಗರಗ

ಶಿಗ್ಗಾಂವಿ: ದೇಶದಲ್ಲಿ ನಡೆಯುವ ಬಹುತೇಕ ಸಂಶೋಧನೆಗಳು ಹೊಸತನದ ಮೇಲೆ ನಡೆಯುತ್ತಿಲ್ಲ. ಈಗಾಗಲೇ ನಡೆದಿರುವ, ಗೊತ್ತಿರುವ ವಿಷಯಗಳ ಮೇಲೆಯೇ ಸಂಶೋಧನೆಗಳು ನಡೆಯುತ್ತಿರುವುದು ವಿಷಾದನೀಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಡೀನ್ ಹಾಗೂ ಸಿಂಡಿಕೇಟ್ ಸದಸ್ಯ ಪ್ರೊ.ಅರವಿಂದ ಮೂಲಿಮನಿ ಹೇಳಿದರು.

ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಶನಿವಾರ ಏರ್ಪಾಟಾಗಿದ್ದ ಪಿಎಚ್.ಡಿ ಕೋರ್ಸ್ ವರ್ಕ್ ಕಮ್ಮಟ-3 ರಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ನಶಿಸಿ ಹೋಗುತ್ತಿರುವ ಸಮುದಾಯ, ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವಂಥ ಮಹತ್ವದ ವಿಷಯಗಳ ಕುರಿತು ಸಂಶೋಧನೆ ಮಾಡುವ ಅಗತ್ಯತೆ ಇದೆ. ಹೆಳವರು ನಮ್ಮ ಜನಾಂಗ, ಮನೆತನದ ಎಲ್ಲ ಮಾಹಿತಿ ಹೊಂದಿರುತ್ತಾರೆ. ಅಜ್ಜ, ಮುತ್ತಜ್ಜ, ಅವರ ಅಜ್ಜ, ಹೀಗೆ ಹತ್ತು, ಇಪ್ಪತ್ತು ತಲೆಮಾರಿನ ಮಾಹಿತಿ ಹೊಂದಿರುತ್ತಾರೆ. ಅಂತಹ ಹೆಳವರ ಸಂಖ್ಯೆ ಕಡಿಮೆಯಾಗುತ್ತಿದೆ. ನಶಿಸಿ ಹೋಗುತ್ತಿರುವ ಅವರ ಬಗ್ಗೆ ಅಧ್ಯಯನ ಆಗಬೇಕಿದೆ ಎಂದು ಸಂಶೋಧನಾರ್ಥಿಗಳಿಗೆ ಸಲಹೆ ನೀಡಿದರು.

ಸಂಶೋಧನಾರ್ಥಿಗಳು ಸಿಬಿಐ, ಸಿಐಡಿ ಅಧಿಕಾರಿಗಳಂತೆ ಕೆಲಸ ಮಾಡಬೇಕು. ಹೊಸದನ್ನು ಜಗತ್ತಿಗೆ ತಿಳಿಸುವ ಕೆಲಸ ಆಗಬೇಕು. ಇಂದಿನ ಸಂಶೋಧನಾರ್ಥಿಗಳು ನಾಳೆಯ ಆಡಳಿತಗಾರರಾಗುತ್ತಾರೆ. ಹಾಗಾಗಿ ಸಂಶೋಧನೆಯ ವಿಷಯಗಳು, ಸಂಶೋಧನೆ ಎಂದಿಗೂ ಅಜರಾಮರವಾಗಿರಬೇಕು ಆ ಮೂಲಕ ಸಾರ್ವಜನಿಕರು ಹಾಗೂ ದೇಶಕ್ಕೆ ಒಳಿತಾಗುವಂತಾಗಬೇಕು ಎಂದರು.

ಕುಲಪತಿಗಳಾದ ಪ್ರೊ.ಟಿ ಎಂ. ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಸಿ.ಟಿ. ಗುರುಪ್ರಸಾದ, ಕವಿವಿ ಪ್ರಾಧ್ಯಾಪಕ ಡಾ.ಮನೋಜ ಡೊಳ್ಳಿ, ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ, ಸಹಾಯಕ ಪ್ರಾಧ್ಯಾಪಕ ಡಾ.ಗಿರೇಗೌಡ ಅರಳಿಹಳ್ಳಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜನಪದ ಕಲಾವಿದ ಶರೀಫ ಮಾಕಪ್ಪನವರ ಪ್ರಾರ್ಥಿಸಿದರು, ಸಹಾಯಕ ಸಂಶೋಧನಾಧಿಕಾರಿ ಡಾ.ಮಲ್ಲಿಕಾರ್ಜುನ ಮಾನ್ಪಡೆ ಕಾರ್ಯಕ್ರಮ ನಿರ್ವಹಿಸಿದರು.