ವಿರಾಜಪೇಟೆಯ ಕಾವೇರಿ ಕಾಲೇಜಿನ ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು ಅರಪಟ್ಟು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.  
ಜಿಲ್ಲೆ

ನೈರ್ಮಲ್ಯಕ್ಕೆ ಹೆಚ್ಚಿನ ಮಹತ್ವ ಸಿಗುವಂತಾಗಲಿ

ಅಭಿನಯ್ ಎಚ್.ಎಂ

ವಿರಾಜಪೇಟೆ: ಸ್ವಚ್ಛತೆ ಹಾಗೂ ನೈರ್ಮಲ್ಯದ ಪಾಠಗಳನ್ನು ಬೋಧಿಸಿ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. ಸ್ವಚ್ಛತೆ ಎಂಬುದು ಪ್ರತಿಯೊಬ್ಬರಲ್ಲೂ ಸ್ವಇಚ್ಛೆಯಿಂದ ಬಂದಾಗ ಸ್ವಚ್ಛ ಪರಿಸರ ನಿರ್ಮಿಸಲು ಸಾಧ್ಯ ಎಂದು ನರಿಯಂಡಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಅಭಿಪ್ರಾಯಪಟ್ಟರು.

ಇಲ್ಲಿನ ಕಾವೇರಿ ಕಾಲೇಜಿನ ಎನ್ನೆಸ್ಸೆಸ್ ಘಟಕ ವತಿಯಿಂದ ಅರಪಟ್ಟು ಕಡಂಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎನ್ನೆಸ್ಸೆಸ್ ಘಟಕದಿಂದ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಂಗಳವಾರ ಗ್ರಾಮ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನಿಗೆ ಆರೋಗ್ಯವೇ ದೊಡ್ಡ ಭಾಗ್ಯ. ಆರೋಗ್ಯ ಉತ್ತಮವಾಗಿರಲು ನೈರ್ಮಲ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು.

ಮನೆಯಲ್ಲಿ ಹಸಿ ಮತ್ತು ಕಸ ಒಣ ಕಸಗಳನ್ನು ಬೇರ್ಪಡಿಸಿ ಹಸಿ ಕಸವನ್ನು ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸಿ ಗಿಡಗಳಿಗೆ ಬಳಸಿಕೊಳ್ಳಬೇಕು. ಅಂತೆಯೇ ಒಣ ಕಸಗಳನ್ನು ಸ್ವಚ್ಛತಾ ಕಾರ್ಮಿಕರಿಗೆ ನೀಡಿ ಪರಿಸರ ಮಾಲಿನ್ಯವಾಗದಂತೆ ಗಮನಹರಿಸಿದರೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಲಿದೆ. ಇದನ್ನು ಹೊರತುಪಡಿಸಿ ಸ್ವಚ್ಛತೆಯ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಹಾಗೂ ಇತರ ಇಲಾಖೆಗಳ ಮೇಲೆ ಹೊರಿಸಿ ಬೇಜವಾಬ್ದಾರಿ ಪ್ರದರ್ಶಿಸುವುದರಿಂದ ಏನೂ ಪ್ರಯೋಜನವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಸದಸ್ಯರಾದ ಪಾಂಡಾ ರಾಣಿ ಗಣಪತಿ , ಎನ್ನೆಸ್ಸೆಸ್ ಯೋಜನಾಧಿಕಾರಿ ಸುನಿಲ್ ಕುಮಾರ್ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳು ನರಿಯಂದಡ ಗ್ರಾಮ ಪಂಚಾಯಿತಿ ಮುಖ್ಯ ರಸ್ತೆಯಲ್ಲಿ ಎರಡು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ನಿರ್ವಹಿಸಿ 15 ಚೀಲದಷ್ಟು ವಿವಿಧ ಪ್ಲಾಸ್ಟಿಕ್, ನೀರಿನ ಬಾಟಲಿ ಹಾಗೂ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿದರು.