ಅರಸೀಕೆರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಕೆ.ಎಂ.ಶಿವಲಿಂಗೇಗೌಡ, ಎಂ.ಜಿ.ಸಂತೋಷ್‌ಕುಮಾರ್, ಮೋಹನ್‌ಕುಮಾರ್, ಅನಂತ ಕುಮಾರ್ ಇತರರಿದ್ದರು. 
ಜಿಲ್ಲೆ

ಮಾನವೀಯ ಮೌಲ್ಯಗಳು ಪಠ್ಯಕ್ರಮದ ಭಾಗವಾಗಲಿ

ಅರಸೀಕೆರೆ: ಸತ್ಯ, ಅಹಿಂಸೆ, ಪ್ರಾಮಾಣಿಕತೆ ಮೊದಲಾದ ಮಾನವೀಯ ಮೌಲ್ಯಗಳು ಪಠ್ಯಕ್ರಮದ ಭಾಗವಾದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರಕ್ಕೆ ಹೊಂದಿಕೊಂಡಂತಿರುವ ಕಸ್ತೂರ ಬಾ ಸೇವಾಶ್ರಮದಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಜ್ಞಾನ, ತಂತ್ರಜ್ಞಾನ ಮುಂದುವರಿದಂತೆ ಸದ್ಗುಣ, ಪರಂಪರೆ ನಶಿಸಿ ಹೋಗುವ ಅಪಾಯವಿದೆ. ಸತ್ಯಹರಿಶ್ಚಂದ್ರ, ಶ್ರವಣಕುಮಾರ ಮೊದಲಾದ ಕಥೆ, ನಾಟಕಗಳು ಗಾಂಧೀಜಿ ಅವರ ಜೀವನದಲ್ಲಿ ಮಹತ್ತರವಾದ ಬದಲಾವಣೆಗೆ ಕಾರಣವಾಗಿವೆ. ಅಂತಹ ಪಠ್ಯವನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದವರೆಗೆ ಕಡ್ಡಾಯ ಮಾಡುವ ಅಗತ್ಯವಿದೆ ಎಂಬುದನ್ನು ಶಿಕ್ಷಣ ತಜ್ಞರು ಮೊದಲು ಮನಗಾಣಬೇಕು.ಇದರಿಂದ ಸತ್ಯ, ಅಹಿಂಸೆ, ಶಿಸ್ತು, ಪ್ರಾಮಾಣಿಕತೆಯಂತಹ ಗುಣಗಳನ್ನು ಬೆಳೆಸಲು ಸಾಧ್ಯವಾಗಲಿದೆ ಎಂದರು.

ಗಾಂಧೀಜಿ ದೇಶದ ದಾಸ್ಯ ವಿಮೋಚನೆಗಾಗಿ ಹೋರಾಟ ನಡೆಸಿದರೆ, ಮಾಜಿ ಪ್ರಧಾನಿ ದಿ.ಲಾಲ್ ಬಹದ್ದೂರ್ ಶಾಸ್ತ್ರಿ ರೈತರು ಹಾಗೂ ಸೈನಿಕರಿಗೆ ವಿಶೇಷ ಗೌರವ ನೀಡಿದ್ದಾರೆ. ಉಭಯ ಮಹನೀಯರು ಜಯಂತಿ ಆಚರಣೆ ನಿಜಕ್ಕೂ ಅರ್ಥಪೂರ್ಣ ಎಂದು ಬಣ್ಣಿಸಿದರು.

ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್ ಮಾತನಾಡಿ, ರೈತರ ಬದುಕು ಸುಸ್ಥಿರಗೊಳ್ಳಲು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಬಿಇಒ ಮೋಹನ್‌ಕುಮಾರ್, ಆರ್. ಅನಂತಕುಮಾರ್, ಪ್ರಭಾರ ಸಿಡಿಪಿಒ ಯೋಗೀಶ್, ಗೀಜಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಸೇರಿದಂತೆ ಹಲವರು ಹಾಜರಿದ್ದರು.