ಶೃಂಗೇರಿ: 100ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಶೈಕ್ಷಣಿಕ, ಆರೋಗ್ಯ, ಸಮುದಾಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಜಿಲ್ಲಾ ರೋಟರಿ ಜಿಲ್ಲೆ-3182 ರ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಹೇಳಿದರು.
ಆದಿಚುಂಚನಗಿರಿ ಸಮುದಾಯ ಭವನದಲ್ಲಿ ರೋಟರಿ ಸಂಸ್ಥೆಯಿಂದ ಶನಿವಾರ ಹಮ್ಮಿಕೊಂಡಿದ್ದ ಸಮರ್ಪಣಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇಂತಹ ಸಂಸ್ಥೆಯಲ್ಲಿದ್ದು ಕೊಂಡು ಪ್ರತಿದಿನ ಹೊಸ ಹೊಸ ವಿಚಾರಗಳನ್ನು ನಾವು ಅರಿತು ಕೊಂಡು ಜನರಿಗೆ ತಿಳಿವಳಿಕೆ ನೀಡಬೇಕು ಎಂದರು.
ಪ್ರಸ್ತುತ ಸನ್ನಿವೇಶದಲ್ಲಿ ಸೇವೆ ಎಂಬುದು ಸಂಸ್ಥೆಗಳ ಮುಖ್ಯ ಗುರಿಯಾಗಬೇಕು. ಮಾನವೀಯ ಮೌಲ್ಯ ನಮ್ಮ ಪ್ರಮುಖ ಉದ್ದೇಶವಾಗಬೇಕು.ವರ್ಷಕೊಮ್ಮೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಹುದ್ದೆ ಬದಲಾವಣೆ ಆಗುತ್ತದೆ. ಬದಲಾವಣೆ ಜಗದ ನಿಯಮ.ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಸಂಸ್ಥೆ ಮುನ್ನೆಡೆಸಿದಾಗ ಮಾತ್ರ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆ ಜಿಲ್ಲಾ ತರಬೇತುದಾರ ರಾಜರಾಮ್ ಭಟ್ ಮಾತನಾಡಿ, ನಾಯಕತ್ವ ಬೆಳೆಸಿಕೊಳ್ಳಲು ಸಂಸ್ಥೆಯಲ್ಲಿ ವಿಪುಲ ಅವಕಾಶಗಳಿವೆ. ನಮ್ಮ ಆಶಯಗಳು ಸಮಾಜದ ಕಟ್ಟಕಡೆಯ ಜನರನ್ನು ತಲುಪಿಸುವ ಕಡೆ ಹೆಚ್ಚು ಕಾಳಜಿ ವಹಿಸಬೇಕು.ರೋಟರಿ ಸಂಸ್ಥೆ ಚುಕ್ಕಾಣಿ ಹಿಡಿಯುವ ನೂತನ ಅಧ್ಯಕ್ಷರು ಸಾಂಘೀಕ ಮನೋಭಾವದಿಂದ ಸದಸ್ಯರ ಜತೆ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದರು.
ರೋಟರಿ ಅಂತರಾಷ್ಟ್ರೀಯ ಸಂಸ್ಥೆ ನಿಯೋಜಿತ ನಿರ್ದೇಶಕ ರೊ.ಕೆ.ಪಿ.ನಾಗೇಶ್, ರೋಟರಿ ಅಧ್ಯಕ್ಷ ಕೆ.ಸಿ.ಚರಣ್, ಸಮರ್ಪಣಾ ಕಾರ್ಯಾಗಾರದ ಚೇರ‌್ಮನ್ ಎಚ್.ಎಸ್.ಸಿದ್ಧಪ್ಪ, ಜಿಲ್ಲಾ 3182ರ ನಿಯೋಜಿತ ಗವರ್ನರ್ ದೇವ್ ಆನಂದ್, ನಿಯೋಜಿತ ಜಿಲ್ಲಾ ಸಲಹೆಗಾರ ರೊ.ಅಭಿನಂದನ್.ಎ.ಶೆಟ್ಟಿ, ಉಪ ಗರ್ವನರ್ ಎಚ್.ಎಸ್.ನಟೇಶ್, ಜಿಲ್ಲಾ ಪದಾಧಿಕಾರಿಗಳಾದ ಜ್ಞಾನ ವಸಂತ ಶೆಟ್ಟಿ,ಾಲಾಕ್ಷ,ಬಿ.ಎಂ.ಭಟ್ ಹಾಜರಿದ್ದರು.