ಶಿವಮೊಗ್ಗ: ರಾಜ್ಯ ಸರ್ಕಾರ ಹಿಂದು ಸಮಾಜದ ಮೇಲೆ ಗದಾಪ್ರಹಾರ ನಡೆಸುತ್ತಿದೆ. ಮಸೀದಿ ಎದುರು ಗಣಪತಿ ಮೆರವಣಿಗೆ ಮಾಡುವಂತಿಲ್ಲ. ಮಂಗಳವಾದ್ಯ ನುಡಿಸುವಂತಿಲ್ಲ. ಹಾಗೆ ಮಾಡಿದರೆ ಕಲ್ಲು ತೂರಾಟ ನಡೆಸುತ್ತೇವೆ ಎಂಬ ಸಂದೇಶವನ್ನು ಒಂದು ಕೋಮಿನವರು ನಾಗಮಂಗಲದಲ್ಲಿ ನೀಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಘಟನೆಯಲ್ಲಿ ಪೆಟ್ರೋಲ್ ಬಾಂಬ್ ಬಳಕೆ ಮಾಡಲಾಗಿದೆ. ಮಸೀದಿಯಿಂದಲೇ ಕಲ್ಲುಗಳು ಹೊರಬಂದಿವೆ. ಪ್ರಾರ್ಥನಾ ಮಂದಿರದಿಂದ ತಲ್ವಾರ್‌ಗಳನ್ನು ತಂದಿದ್ದಾರೆ. ರಾಜ್ಯ ಸರ್ಕಾರ ಹಿಂದು ಸಮಾಜದ ಕ್ಷಮೆ ಕೋರಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ನಾಗಮಂಗಲದ ಘಟನೆ ಮತ್ತೆ ಮರುಕಳಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣ ತಪ್ಪುತ್ತದೆ. ನಮ್ಮ ದೇವತೆಗಳ ಕೈನಲ್ಲೂ ಆಯುಧಗಳಿವೆ. ಅದು ದುಷ್ಟರ ಸಂಹಾರಕ್ಕಾಗಿ. ಇಂತಹ ಘಟನೆಯಿಂದ ಹಿಂದು ಸಮಾಜವನ್ನು ಹೆದರಿಸಲು ಸಾಧ್ಯವಿಲ್ಲ. ನಮ್ಮದು ಬೆದರುವ ಸಮಾಜವೂ ಅಲ್ಲ ಎಂದರು.