ಕೆ.ಆರ್.ನಗರ: ಮಂಡ್ಯ ಲೋಕಸಭಾ ಕ್ಷೇತ್ರದ ಜನತೆ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಯಾಗಿದ್ದ ಕುಮಾರಸ್ವಾಮಿ ಅವರನ್ನು ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡುವ ಮೂಲಕ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಮೂವರು ಮಾಜಿ ಮುಖ್ಯಮಂತ್ರಿಗಳು ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಭಿವೃದ್ಧಿ, ರೈತರ ಪರವಾಗಿ ಉತ್ತಮವಾದ ಕೆಲಸ ನಿರ್ವಹಿಸಲು ಸಮರ್ಥರಿದ್ದು ನರೇಂದ್ರ ಮೋದಿ ಅವರಿಗೆ ಉತ್ತಮ ಖಾತೆ ನೀಡುವುದರ ಜತೆಗೆ ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಕೃಷಿ ಮಂತ್ರಿ ಸ್ಥಾನ ನೀಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೇರೆ ರಾಜ್ಯಗಳ ಸಂಸದರು ತಮ್ಮ ರಾಜ್ಯಗಳ ಸಮಸ್ಯೆ ಬಂದಾಗ ಸಂಸತ್‌ನಲ್ಲಿ ಒಟ್ಟಾಗಿ ನಿಂತು ಹೋರಾಟ ಮಾಡುತ್ತಾರೆ. ನಮ್ಮ ಸಂಸದರು ಬಾಯಿ ಬಿಡುವುದಿಲ್ಲ. ಇನ್ನು ಮುಂದಾದರೂ ಸದಸ್ಯರು ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡಲಿ ಎಂದು ಮನವಿ ಮಾಡಿದರು.
ಮೈಸೂರು ಮಹರಾಜರ ಕೊಡುಗೆ ನಮ್ಮ ರಾಜ್ಯಕ್ಕೆ ಅಪಾರ. ಯದುವೀರ್ ಒಡೆಯರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕಾಗಿತ್ತು. ಆದರೇ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಜಾತಿ ಹೆಸರಿನಲ್ಲಿ ಸಣ್ಣತನದ ರಾಜಕೀಯ ಮಾಡಲು ಹೋಗಿ ಈಗ ಸೋಲು ಅನುಭವಿಸುವ ಪರಿಸ್ಥಿತಿ ತಂದು ಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಜನಮತ ಕಳೆದುಕೊಂಡಿದೆ ಎಂಬುದನ್ನು ಈ ಚುನಾವಣೆ ಸಾಬೀತು ಮಾಡಿದೆ. ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ 27 ಸಾವಿರಕ್ಕೂ ಹೆಚ್ಚು ಅಂತರದಲ್ಲಿ ಗೆದ್ದಿದ್ದ ಕಾಂಗ್ರೆಸ್ ಶಾಸಕರು ಈ ಭಾರಿ ಎನ್‌ಡಿಎ ಅಭ್ಯರ್ಥಿ ವಿರುದ್ಧ ಸಮಬಲ ಸಾಧಿಸಲಾಗದಿರುವುದು ಜನಾಭಿಪ್ರಾಯವಾಗಿದೆ ಎಂದು ಕುಟುಕಿದರು.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ವತಿಯಿಂದ ಎಚ್‌ಡಿಕೆ ಅವರನ್ನು ಶೀಘ್ರ ಅಭಿನಂದಿಸಲಾಗುವುದು ಎಂದರು.
ಮೂಳೆತಜ್ಞ ಡಾ.ಮೆಹಬೂಬ್‌ಖಾನ್, ಬಿಜೆಪಿ ಮುಖಂಡ ಹೊಸಹಳ್ಳಿವೆಂಕಟೇಶ್, ಪುರಸಭಾ ಸದಸ್ಯ ಕೆ.ಪಿ.ಪ್ರಭುಶಂಕರ್, ಮಾಜಿ ಸದಸ್ಯ ಪೆರಿಸ್ವಾಮಿ, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಪ್ರಭಾಕರ್ ಜೈನ್, ಮುಖಂಡರಾದ ಹನಸೋಗೆ ನಾಗರಾಜ್, ಕೃಷ್ಣಭಟ್, ಕೃಷ್ಣಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.