ಜಮಖಂಡಿ ತಾಲೂಕಿನ ಹಲ್ಯಾಳ ಗುರುದೇವಾಶ್ರಮದಲ್ಲಿ ನಡೆದ ಶ್ರೀ ಗುರುದೇವಾಶ್ರಮದಲ್ಲಿ ನಡೆದ ಶ್ರೀ ಗುರುದೇವ ಸತ್ಸಂಗದಲ್ಲಿ ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ದೇವರು ಆಶೀರ್ವಚನ ನೀಡಿದರು. ದಯಾಶಂಕರ ಶ್ರೀಗಳು, ಹರ್ಷಾನಂದ ಶ್ರೀಗಳು, ಗುರುಪ್ರಸಾದ ಶ್ರೀಗಳು ಇದ್ದಾರೆ. 
ಜಿಲ್ಲೆ

ಸತ್ಸಂಗದಿಂದ ದೇವಭಾವ ಮೂಡಲಿ

Vijayapura - Desk - Gurappa Lokuri

ಜಮಖಂಡಿ: ಗುರುವಿನ ಉಪದೇಶದಿಂದ ಜೀವನದ ಬಂಧನಗಳಿಂದ ಮುಕ್ತರಾಗಲು ಸಾಧ್ಯ. ಸತ್ಸಂಗದಲ್ಲಿ ಇರುವವರೆಲ್ಲರಲ್ಲೂ ಭೇದಭಾವ ಹೋಗಿ ದೇವಭಾವ ಮೂಡಬೇಕೆಂದು ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ದೇವರು ಹೇಳಿದರು.

ತಾಲೂಕಿನ ಹುಲ್ಯಾಳ ಗುರುದೇವಾಶ್ರಮದಲ್ಲಿ ಶ್ರೀಗುರು ಸತ್ಸಂಗ ಬಳಗದ ಆಶ್ರಯದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಗುರುದೇವ ಸತ್ಸಂಗದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಬದುಕೇ ಒಂದು ಸಂದೇಶವಾಗಿತ್ತು. ಶ್ರೀಗಳ ಜೀವನ ನೋಡಿ ಕಲಿತವರ ಜೀವನ ಪಾವನ ಆಗುತ್ತಿತ್ತು. ಸಿದ್ಧೇಶ್ವರ ಶ್ರೀಗಳು ಉಪಮೆಯನ್ನು ಮೀರಿದವರಾಗಿದ್ದರು ಎಂದು ನುಡಿದರು.

ಮೈಗೂರ ಶಿವಾನಂದ ಮಠದ ಗುರುಪ್ರಸಾದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸ್ಥಿರವಲ್ಲದ ಧನ, ಜನ, ಯೌವನ ನಂಬಬಾರದು. ಆದ್ದರಿಂದ ಸತ್ಸಂಗ ಬಿಟ್ಟು ಅನ್ಯ ಮಾರ್ಗವಿಲ್ಲ. ಸತ್ಸಂಗದಲ್ಲಿದ್ದರೆ ಸಾಧನೆ ಸಾಧ್ಯವಾಗುತ್ತದೆ. ಸತ್ಸಂಗದಿಂದ ಮುಂದೆ ಸಾಗುವ ಮಾರ್ಗ ಗೋಚರಿಸುತ್ತದೆ ಎಂದರು.

ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ಇನ್ನೊಬ್ಬರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಬಾರದು. ದುಡ್ಡಿಗೆ ಆಶೆ ಪಡಬಾರದು. ಯಾರಾದರೂ ಜಗಳ ತೆಗೆದರೆ ಮೌನವಾಗಿರಬೇಕು. ಅಹಂಕಾರ ಎಂದಿಗೂ ಬರಬಾರದು ಎಂಬುದು ಸಿದ್ಧೇಶ್ವರ ಶ್ರೀಗಳು ತಮಗೆ ನೀಡಿದ ಉಪದೇಶಗಳಾಗಿದ್ದವು ಎಂದು ಸ್ಮರಿಸಿಕೊಂಡರು.

ತುಮಕೂರಿನ ವಿವೇಕ ಸಿದ್ಧಾಶ್ರಮದ ದಯಾಶಂಕರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಅನ್ನಪ್ರಸಾದ ದಾಸೋಹ ಸೇವೆಗೈದ ಅಲ್ಕಾ ಮಾಳಗಿ ಅವರನ್ನು ಸನ್ಮಾನಿಸಲಾಯಿತು. ಹುನ್ನೂರಿನಲ್ಲಿ 52 ವರ್ಷಗಳಿಂದ ಸತ್ಸಂಗ ನಡೆಯಿಸಿಕೊಂಡು ಬಂದಿರುವ ದಯಾನಂದ ಶಾಸಿ ಹಾಗೂ ಶಿವಪುತ್ರ ಅವರನ್ನು ಸನ್ಮಾನಿಸಲಾಯಿತು.

ಪ್ರಗತಿ ಮಹಿಳಾ ಮಂಡಳದ ಸದಸ್ಯೆಯರು ಪ್ರಾರ್ಥನೆ ಗೀತೆ ಹಾಡಿದರು. ಗುರುಬಸಗೌಡ ಪಾಟೀಲ, ಶಿವಾನಂದ ಬಾಡನವರ(ಹಾರ್ಮೊನಿಯಂ), ರಾಮಚಂದ್ರ ಹೂಗಾರ(ತಬಲಾ) ಸಂಗೀತ ಸೇವೆ ಸಲ್ಲಿಸಿದರು. ಮಲ್ಲೇಶಪ್ಪ ಗೆದ್ದೆಪ್ಪನವರ ನಿರೂಪಿಸಿದರು.