ಹೊಸದುರ್ಗ: ಸಮರ್ಥ ಗುರು ಹಾಗೂ ಮಹತ್ತರ ಗುರಿ ಉಪ್ಪಾರ ಸಮುದಾಯ ಹೊಂದಿದ್ದು, ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ತಾಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಭಗೀರಥ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಜಾತಿ ವರ್ಗೀಕರಣದ ವ್ಯವಸ್ಥೆಯಲ್ಲಿ ಹಿಂದುಳಿದ ಜನರು ಶಿಕ್ಷಣದಿಂದ ವಂಚಿತರಾದ ಕಾರಣದಿಂದ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವಾಸ್ತವ ಅರಿತು ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಸಮುದಾಯ ರಾಜಕೀಯ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಅಭಿವೃದ್ಧಿ ಹೊಂದಿರುವ ಸಮುದಾಯಗಳನ್ನು ನೋಡಿ ಅಸೂಯೆ ಪಡದೆ ಅವರನ್ನು ಮಾದರಿಯಾಗಿಸಿಕೊಂಡು, ಒಗ್ಗಟ್ಟಿನಿಂದ ಪ್ರಗತಿಯತ್ತ ಸಾಗಬೇಕು. ಹಿಂದುಳಿದ ಹಾಗೂ ಅಧಿಕಾರ ವಂಚಿತ ಸಮುದಾಯಗಳು ಸಂಘಷರ್ ಮತ್ತು ಸಂಘಟನೆಯಿಂದ ಮಾತ್ರ ರಾಜಕೀಯ ಶಕ್ತಿ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದರು.