ಜಿಲ್ಲೆ

ಜಾನಪದ ಉಳಿವಿಗೆ ಆದ್ಯತೆ ನೀಡಲಿ

ಅರಟಾಳ: ಜಾನಪದ ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹಣಮಾಪುರದ ಶ್ರೀಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.

ಸಮೀಪದ ಕೌಲಗುಡ್ಡ ಗ್ರಾಮದ ಸಿದ್ಧಸಿರಿ ಸಿದ್ಧಾಶ್ರಮದಲ್ಲಿ ಶನಿವಾರ ಯಲ್ಪಾರಟಿ ಅಮೋಘದ್ಧೇಶ್ವರ ಡೊಳ್ಳಿನ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜಾನಪದ ಕಲಾಮೇಳ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಭಾರತೀಯರು. ನಮ್ಮ ನಾಡು-ನುಡಿ, ಸಂಸ್ಕೃತಿಯನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಿದೆ.

ಹಿಂದಿನ ಕಾಲದಿಂದಲೂ ಜಾನಪದ ಕಲೆಗಳು ನಡೆದುಕೊಂಡು ಬಂದಿವೆ. ಅವುಗಳನ್ನು ಕಾಪಾಡಿಕೊಂಡು ಹೋಗಬೇಕಿದೆ. ಈಗ ನಾವು ಸಿನಿಮಾ, ಧಾರಾವಾಹಿಗಳಿಗೆ ದಾಸರಾಗಿ ನಮ್ಮ ಪೂರ್ವಜರು ಕೊಟ್ಟಂತ ಸಂಸ್ಕೃತಿ ಬಿಟ್ಟು ನಡೆಯುತ್ತಿದ್ದೇವೆ. ಹಾಗಾದಂತೆ ಮಕ್ಕಳಿಗೆ ಒಳ್ಳೆಯ ವಿದ್ಯೆಯ ಜೊತೆಗೆ ಸಂಸ್ಕಾರ ಕೊಟ್ಟರೆ ಮಗುವಿನ ಜೀವನ ಸುಂದರವಾಗಿರುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾಗಿನೆಲೆ ಪ್ರಾಧಿಕಾರದ ಸಂಶೋಧಕ ಡಾ. ಜಗನ್ನಾಥ ಗೆನ್ನನವರ, ಅಮಸಿದ್ಧ ಒಡೆಯರ, ಎಸ್.ಎ.ಕೊಣ್ಣೂರ, ಶ್ರೀಶೈಲ್ ಸಂಭೋಜಿ, ಧರೇಪ್ಪ ಮೊಟ್ಟೆ, ಅಣ್ಣಪ್ಪ ಪಾಟೀಲ, ಹಣಮಂತ ಸಂಭೋಜಿ ಇದ್ದರು. ಅಶ್ವಥ ಪೂಜಾರಿ ನಿರೂಪಿಸಿದರು. ಶಿವಸಿದ್ಧ ಲಾಳಿ ಸ್ವಾಗತಿಸಿ, ಸಾಬು ಗಸ್ತಿ ವಂದಿಸಿದರು.