ಹನಗೋಡು: ಸರ್ಕಾರ ತಾಳೆ ಬೆಳೆಗೂ ಬೆಂಬಲ ಬೆಲೆ ಘೋಷಿಸಿರುವ ಕಾರಣ ತೆಂಗು ಮತ್ತು ಅಡಕೆ ಬೆಳೆಗಳಿಗೆ ಸೀಮಿತವಾಗದೆ ತಾಳೆ ಬೆಳೆ ಬೆಳೆಯಲು ರೈತರು ಮುಂದಾಗಬೇಕು ಎಂದು ಹುಣಸೂರು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ.ನಾಗರಾಜು ತಿಳಿಸಿದರು.
ಹನಗೋಡು ಹೋಬಳಿಯ ಕಚುವಿನಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ಬುಧವಾರ ಆಯೋಜಿಸಿರುವ ತಾಳೆ ಬೆಳೆ ಹಾಗೂ ತರಕಾರಿ ಬೆಳೆಗಳ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಭಾರತದಲ್ಲಿ ಖಾದ್ಯ ತೈಲದ ವಾರ್ಷಿಕ ಬೇಡಿಕೆಯನ್ನು ಸ್ಥಳೀಯ ಉತ್ಪಾದನೆಯಿಂದ ಪೂರೈಸಲು ಸಾಧ್ಯವಾಗದ ಕಾರಣ, ಸಾವಿರಾರು ಕೋಟಿ ರೂ. ಮೌಲ್ಯದ ಖಾದ್ಯ ತೈಲವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಖಾದ್ಯ ತೈಲದ ಆಮದು ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಲ್ಲಿ ತೈಲ ಬೆಳೆಗಳ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಾಳೆ ಬೆಳೆ ಕ್ಷೇತ್ರ ವಿಸ್ತರಣೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕ ಸಬಲರಾಗಲು ರೈತರು ಮುಂದಾಗಬೇಕು ಎಂದು ತಿಳಿಸಿದರು.
ತಾಳೆ ಬೆಳೆಯ ತಾಂತ್ರಿಕ ತಜ್ಞ ಹನುಮೇಗೌಡ ಮಾತನಾಡಿ, ತಾಳೆ ಬೆಳೆಯನ್ನು ಖರೀದಿಸಿ ನೇರವಾಗಿ ಹಣವನ್ನು ರೈತರ ಖಾತೆಗೆ ಜಮಾ ಮಾಡುವುದರಿಂದ ಮಾರುಕಟ್ಟೆ ಸಮಸ್ಯೆಯಾಗಲಿ, ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಆದ್ದರಿಂದ ತಾಳೆ ಬೆಳೆ ಬೆಳೆದು ಆರ್ಥಿಕವಾಗಿ ಸಧೃಡರಾಗುವಂತೆ ರೈತರಿಗೆ ಸಲಹೆ ನೀಡಿದರು.
ವಿಜ್ಞಾನಿ ಅರವಿಂದ್ ಮಾತನಾಡಿ, ಇಂದು ನಮ್ಮ ರೈತರು ಪ್ರಯೋಗಾತ್ಮಕವಾಗಿ ಬೆಳೆಗಳನ್ನು ಬೆಳೆಯಬೇಕಿದೆ. ಒಂದೇ ಬೆಳೆಗೆ ಜೋತು ಬೀಳುವ ಪದ್ಧತಿ ಬಿಟ್ಟು ಆಧುನಿಕ ಕೃಷಿಯಲ್ಲಿ ನಿರೀಕ್ಷೆಗೂ ಮೀರಿ ಪ್ರಗತಿ ಕಾಣಲು ಸಾಧ್ಯ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಗ್ರಾ.ಪಂ ಅಧ್ಯಕ್ಷೆ ಗೀತಾ ಸುರೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಳೆ ಬೆಳೆಗಾರ ಮಹದೇವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಹನಗೋಡು ತೋಟಗಾರಿಕಾ ಸಹಾಯಕ ಅಧಿಕಾರಿ ಎಚ್.ಎಸ್.ರವಿ, ಗ್ರಾಮ ಉಪಾಧ್ಯಕ್ಷ ರುಕ್ಮಿಣಿ ಸುರೇಶ್, ತಾಪಂ ಮಾಜಿ ಸದಸ್ಯರಾದ ಕೆ.ಗಣಪತಿ, ಪುಷ್ಪಲತಾ, ರೈತ ಮುಖಂಡರಾದ ಕೆ.ಬಿ.ಉಜ್ಜನಿಗೌಡ, ಕೆ.ಎಸ್.ಆನಂದ್, ಲೋಕೇಶ್, ಉಜ್ಜನಿಗೌಡ, ಕೆ.ಎನ್.ಶೇಖರ್, ಕೃಷ್ಣ, ಕೆ.ಬಿ. ಮಹದೇವ್, ಸುಜೇಂದ್ರ, ಮೋಟೇಗೌಡ, ಶಿವರಾಮ್, ಸಹದೇವ್ ಕೆಂಪೇಗೌಡ, ಸುಬ್ರಮಣಿ, ಜಯರಾಮ್, ಉಮಬೋಸ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.