ಜಿಲ್ಲೆ

ರೈತರು ಬೆಂಬಲ ಬೆಲೆ ಸೌಲಭ್ಯ ಪಡೆಯಲಿ

ರಾಘವೇಂದ್ರಗೌಡ ಭೀ ಪಾಟೀಲ್

ಸವದತ್ತಿ: ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಂಬಲ ಬೆಲೆಯಡಿ ಉದ್ದು, ಹೆಸರು ಮತ್ತು ಸೋಯಾಬೀನ್ ಖರೀದಿಸಲು ಖರೀದಿ ಕೇಂದ್ರ ತೆರೆಯಲಾಗಿದ್ದು ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಇಲ್ಲಿನ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಲ್ಲಿ ಶನಿವಾರ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಎ್.ಎ.ಕ್ಯೂ. ಗುಣಮಟ್ಟದ ಉದ್ದು, ಹೆಸರು ಮತ್ತು ಸೋಯಾಬೀನ್ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಮುಕ್ತ ಮಾರುಕಟ್ಟೆಯಲ್ಲಿ ಈ ಬೆಳೆಗಳಿಗೆ ಬೆಲೆ ಕಡಿಮೆ ಇರುವುದರಿಂದ ಕನಿಷ್ಠ ಬೆಂಬಲ ಬೆಲೆ ಅಡಿ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಖರೀದಿ ಕೇಂದ್ರವು ರೈತರ ಆರ್ಥಿಕ ಭದ್ರತೆ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ರವೀಂದ್ರ ಯಲಿಗಾರ ಮಾತನಾಡಿ, ಉದ್ದಿನಕಾಳು ಪ್ರತಿ ಕ್ವಿಂಟಾಲ್‌ಗೆ 7,800 ರೂ., ಹೆಸರು ಪ್ರತಿ ಕ್ವಿಂಟಾಲ್‌ಗೆ 8,768 ರೂ., ಸೋಯಾಬಿನ್ ಪ್ರತಿ ಕ್ವಿಂಟಾಲ್‌ಗೆ 5328 ರೂ. ದರ ನಿಗದಿಯಾಗಿದೆ. 90 ದಿನಗಳ ಅವಧಿಗೆ ಖರೀದಿ ಕೇಂದ್ರ ತೆರೆಯಲಾಗುವುದು ಎಂದರು.

ಕೃಷಿ ಸಹಾಯಕ ನಿರ್ದೇಶಕ ಶಿವಪ್ರಕಾಶ ಪಾಟೀಲ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಜಂಬ್ರಿ, ಮ್ಯಾನೇಜರ್ ಪ್ರಕಾಶ ಯಲಿಗಾರ, ಚಂದ್ರು ಶ್ಯಾಮರಾಯನವರ, ಮಲ್ಲಿಕಾರ್ಜುನ ಬೇವೂರ, ಚತ್ರೇಶ ದಾಸರ, ಮಂಜುನಾಥ ಪಾಚಂಗಿ ಸೇರಿ ಪುರಸಭೆ ಸದಸ್ಯರು, ರೈತರು ಇದ್ದರು.