ಕೂಡ್ಲಿಗಿ: ಆರೋಗ್ಯ ಉತ್ತಮವಾಗಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯ. ಆದ್ದರಿಂದ ದುಶ್ಚಟಕ್ಕೆ ದಾಸರಾಗಬೇಡಿ ಎಂದು ಪಿಎಸ್‌ಐ ಜಿ.ಸುಬ್ರಮಣ್ಯಂ ಹೇಳಿದರು.
ಇದನ್ನೂ ಓದಿ:ಮಾದಕ ದ್ರವ್ಯ ವಿರುದ್ಧ ಜನ ಜಾಗೃತಿ ಜಾಥಾ
ಗುಡೇಕೋಟೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಕಾಲೇಜು ವಿಭಾಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ದ್ರವ್ಯಗಳ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲರೂ ಮದ್ಯ, ಧೂಮಪಾನದಿಂದ ದೂರವಿದ್ದು, ಕುಟುಂಬದಲ್ಲಿ ಉತ್ತಮ ವಾತಾವರಣ ಇರುವಂತೆ ನೋಡಿಕೊಳ್ಳಿ. ಮಾದಕ ವಸ್ತುಗಳ ಸೇವನೆಯಿಂದ ಸಮಾಜ ಹಾಳಾಗುವುದಲ್ಲದೆ, ಯೌವನದಲ್ಲಿಯೇ ಸಾವಿಗೆ ಹತ್ತಿರವಾಗಬೇಕಾಗುತ್ತದೆ. ಇದರಿಂದ ಕುಟುಂಬಗಳು ಬೀದಿಗೆ ಬೀಳುವಂತಾಗುತ್ತದೆ ಎಂದರು.
ಪ್ರಾಚಾರ್ಯ ಎಂ.ಟಿ.ಗಿರೀಶ್ ಮಾತನಾಡಿ, ಸ್ವಾತಂತ್ರೃಪೂರ್ವದಲ್ಲಿ ನೂರಕ್ಕೆ ಮೂರರಷ್ಟು ಜನ ಮಾತ್ರ ದುಶ್ಚಟಕ್ಕೆ ಬಲಿಯಾಗುತ್ತಿದ್ದರು. ಆದರೆ, ಈಗ 100ಕ್ಕೆ 90 ಜನ ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ. ಮಾದಕ ದ್ರವ್ಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದರಿಂದ ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಂದ ದೂರ ಇರಬೇಕು ಎಂದು ತಿಳಿಸಿದರು.
ಸಿ.ಎಸ್.ಪುರ ವಲಯ ಮೇಲ್ವಿಚಾರಕಿ ಅಶ್ವಿನಿ, ಗುಡೇಕೋಟೆ ವಲಯ ಮೇಲ್ವಿಚಾರಕ ಕರಿಯಪ್ಪ, ಉಪನ್ಯಾಸಕರಾದ ರಾಣೋಜಿ ನಾಯ್ಕ, ರಾಜೇಶ್, ಬಸವರಾಜ್, ಚಿದಾನಂದ, ಚೈತ್ರಕುಮಾರ್, ಅಂಬಿಕಾ, ದುರುಗೇಶ್, ಪೊಲೀಸ್ ಕಾನ್‌ಸ್ಟೇಬಲ್ ಎಚ್.ಎಂ.ನಾಗೇಶ, ಸೇವಾ ಪ್ರತಿನಿಧಿ ಕವಿತಾ ಇತರರಿದ್ದರು.