ಜಿಲ್ಲೆ

ಬಾಂಧವ್ಯ ವೃದ್ಧಿಗೆ ಜಾತ್ರೆಗಳು ವೇದಿಕೆಯಾಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ

ಸುತ್ತೂರು: ಜಾತಿ, ಧರ್ಮದ ನಡುವೆ ಬೆಂಕಿ ಹಚ್ಚುವ ಕೆಲಸವಾಗುತ್ತಿರುವ ಈ ಕಾಲಘಟ್ಟದಲ್ಲಿ ಬಾಂಧವ್ಯ, ಸಹೋದರತ್ವ ಬೆಳೆಯಲು ಜಾತ್ರೆಗಳು ವೇದಿಕೆಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಿಸಿದರು.
ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಬುಧವಾರ ದೇಸಿ ಆಟಗಳಿಗೆ ಚಾಲನೆ ನೀಡಿ ಮಾತನಾಡಿ, ಬಸವಾದಿ ಶರಣರು ಸಮಸಮಾಜದ ಕನಸು ಕಂಡವರು. ಆದರೆ ಇತ್ತೀಚಿನ ರಾಜಕೀಯದಲ್ಲಿ ಜಾತಿ, ಧರ್ಮ ನಡುವೆ ಕಂದಕ ಉಂಟು ಮಾಡಿ ಬೆಂಕಿ ಹಚ್ಚುವ ಕೆಲಸ ಅಗುತ್ತಿದೆ. ಹಾಗಾಗಿ ಇಂತಹ ದ್ವೇಷದ ದಳ್ಳುರಿಗೆ ಜಾತ್ರೆಗಳು ಪರಿಹಾರವಾಗಲಿ ಎಂದು ಹೇಳಿದರು.
ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜಾತಿಯ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ. ಸರ್ವಜನಾಂಗದ ಶಾಂತಿಯ ತೋಟದಂತೆ ಸಮಾಜ ಇರಬೇಕು ಎಂದು ಕುವೆಂಪು ಆಶಯ ವ್ಯಕ್ತಪಡಿಸಿದ್ದರು. ಅವರ ನುಡಿ ಸಾಕಾರ ಆಗಬೇಕಾದರೆ ಎಲ್ಲರೂ ಮನುಷ್ಯರಾಗಬೇಕು, ವಿಶ್ವಮಾನವರಾಗಬೇಕು ಎಂದರು.
ಜ್ಞಾನ ಯಾರದೇ ಸ್ವತ್ತಲ್ಲ. ಜ್ಞಾನ ಒಬ್ಬರ ಸ್ವತ್ತಾಗಿದ್ದರೆ ಅಂಬೇಡ್ಕರ್ ಸಂವಿಧಾನ ರಚಿಸಲು ಸಾಧ್ಯ ಆಗುತ್ತಿರಲಿಲ್ಲ. ವಾಲ್ಮೀಕಿ ರಾಮಾಯಣ ಬರೆಯಲು, ವ್ಯಾಸರು ಮಹಾಭಾರತವನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಸಮಾಜದಲ್ಲಿ ಇನ್ನೂ ಸಮಾನತೆ ಬಂದಿಲ್ಲ. ಮೇಲು- ಕೀಳು ಭಾವನೆ ಹೋಗಿಲ್ಲ. ಬರೀ ಓಟು ಹಾಕುವ ಸ್ವಾತಂತ್ರ್ಯ ಬಂದರೆ ಸಾಲದು, ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬಂದಾಗ ಸ್ವಾತಂತ್ರ್ಯ ಬಂದಿರುವುದು ಸಾರ್ಥಕವಾಗಲಿದೆ. ಸಂಪತ್ತು ಅಧಿಕಾರ ಒಬ್ಬರ ಕೈಯಲ್ಲಿ ಕೇಂದ್ರೀಕೃತವಾಗಬಾರದು. ಸಮಾಜದಲ್ಲಿ ಎಲ್ಲರಿಗೂ ಸಮಾನತೆ ಸಿಗುವಂತಾಗಬೇಕು ಎಂದರು.
ಬೇರೆಡೆಯೂ ಜಾತ್ರೆಗಳು ನಡೆಯುತ್ತವೆ. ಆದರೆ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ವಿಶೇಷ ಮಹತ್ವವಿದೆ. ವೇದಿಕೆಯಲ್ಲಿ ಒಕ್ಕಲಿಗರು, ಲಿಂಗಾಯತರು, ಕುರುಬನಾದ ನಾನು, ಹಿಂದುಳಿದ ವರ್ಗದವರು ಕುಳಿತಿದ್ದೇವೆ. ಇದಕ್ಕೆ ಸಂವಿಧಾನ ಕಾರಣವಾಗಿದೆ. ಸಂವಿಧಾನ ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿದೆ. ಕೆಲ ಪಟ್ಟಭದ್ರರು ಸಂವಿಧಾನವನ್ನು ಬದಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಸುತ್ತೂರು ಮಠ ಧಾರ್ಮಿಕ, ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಜತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇಡೀ ದೇಶ ಗುರುತಿಸುವ ಕೆಲಸ ಮಾಡಿದೆ. ಸಮಾಜದಲ್ಲಿ ಬದಲಾವಣೆ ತರುವ ಕಾರ್ಯವನ್ನು ಶ್ರೀಮಠ ಮಾಡಿದೆ ಎಂದು ಬಣ್ಣಿಸಿದರು.
ಸುತ್ತೂರು ಶ್ರೀಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಸಂಸ್ಥೆಯಲ್ಲಿ ಓದಿ ಲಕ್ಷಕ್ಕೂ ಹೆಚ್ಚು ಇಂಜಿನಿಯರ್, ವೈದ್ಯರು, ಪದವೀಧರರು ಹೊರ ಬಂದಿದ್ದಾರೆ. ಈ ಮೂಲಕ ಸುತ್ತೂರು ಸ್ವಾಮೀಜಿ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿದರು. ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಇತರರು ಇದ್ದರು.