ವಿಜಯವಾಣಿ ಸುದ್ದಿಜಾಲ ಧಾರವಾಡ
ಜೀತ ಪದ್ಧತಿ ಒಂದು ಶಾಪ. ಇದರ ವಿಮೋಚನೆಗೆ ಸರ್ಕಾರ ಹಲವು ಕಾನೂನುಗಳನ್ನು ರೂಪಿಸಿದೆ. ಪ್ರತಿ ಹಂತದಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಸರಿಯಾಗಿ, ಕಾನೂನಾತ್ಮಕವಾಗಿ ನಿಭಾಯಿಸಿ ಜೀತ ಮುಕ್ತ ಸಮಾಜವನ್ನು ಸೃಷ್ಟಿಸಲು ಕಾರ್ಯ ಪ್ರವೃತ್ತರಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಎಫ್. ದೊಡ್ಡಮನಿ ಹೇಳಿದರು.
ಜೀತ ಪದ್ಧತಿ ನಿರ್ಮೂಲನಾ ದಿನ ನಿಮಿತ್ತ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜೀತ ಪದ್ಧತಿ ನಿಷೇಧ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಪಂದಿಂದ ಜಿಲ್ಲಾ ಮಟ್ಟದವರೆಗೆ ಎಲ್ಲ ಹಂತದ ಅಧಿಕಾರಿಗಳಿಗೆ ಅಧಿಸೂಚನೆಯಡಿ ನಿಗದಿಪಡಿಸಿರುವ ಕರ್ತವ್ಯಗಳ ಕುರಿತು ಮತ್ತು ಜೀತ ಕಾರ್ಮಿಕ ಪದ್ಧತಿ (ರದ್ಧತಿ) ಕಾಯ್ದೆ 1976, ಜೀತ ಪದ್ಧತಿಗೆ ಒತ್ತಾಯಿಸುವವರ ವಿರುದ್ಧ ಕಾಯ್ದೆ, ಜೀತ ವಿಮುಕ್ತರ ಪುನರ್ವಸತಿ ಯೋಜನೆಗಳ ಬಗ್ಗೆ ಸರಿಯಾದ ತರಬೇತಿ ಮತ್ತು ಮಾಹಿತಿ ಹೊಂದಿರಬೇಕು. ಜೀತ ಕಾರ್ಮಿಕರನ್ನು ಗುರುತಿಸುವಿಕೆ ಹಾಗೂ ರಕ್ಷಣೆ, ಪುನರ್ವಸತಿ ಕುರಿತಂತೆ ಸರ್ಕಾರಗಳು ಹೊರಡಿಸಿರುವ ಸುತ್ತೋಲೆ, ನಿರ್ದೇಶನ ಪಾಲಿಸಬೇಕು ಎಂದರು.
ಸಿಇಒ ಭುವನೇಶ ಪಾಟೀಲ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಜವಾಬ್ದಾರಿಗಳನ್ನು ಬೇರೆಯವರಿಗೆ ವರ್ಗಾಯಿಸದೆ ತಾವೇ ನಿರ್ವಹಿಸಬೇಕು. ಸರ್ಕಾರಿ ನೌಕರರು ಜೀತಪದ್ಧತಿ ಹೋಗಲಾಡಿಸಲು ಪ್ರಯತ್ನ ಮಾಡಬೇಕು. ಜಿಲ್ಲೆಯಲ್ಲಿ ಜೀತ ಪದ್ಧತಿ ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಎಂದರು.
ಜೀತ ವಿಮುಕ್ತತೆಯ ಪ್ರತಿಜ್ಞೆಯನ್ನು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಬೋಧಿಸಿದರು.
ಮಾರಿಕಾಂಬ ಹುಲಕೋಟಿ, ಕೆ. ಶ್ರೀಧರ, ಅಶೋಕ ಒಡೆಯರ್, ಅಕ್ರಮ ಅಲ್ಲಾಪುರ, ರಜನಿ ಹಿರೇಮಠ, ಭುವನೇಶ್ವರಿ ಕೋಟಿಮಠ, ಗುರು ಸುಣಗಾರ, ಬಸವರಾಜ್ ಪಂಚಾರಿಮಠ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.