ಕೊಳ್ಳೇಗಾಲ: ಕತ್ತಿ ಹಬ್ಬ ಕುರಿತು ದೇವಾಂಗ ಸಮಾಜದ ಮುಖಂಡ ಎ.ಎನ್.ನಾಗರಾಜಯ್ಯ ಅವರು ಇತ್ತೀಚೆಗೆ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಶ್ರೀ ರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿ ಹಬ್ಬ ಟ್ರಸ್ಟ್ ಅಧ್ಯಕ್ಷ ಸಿ.ಎಂ.ಪರಮೇಶ್ವರಯ್ಯ ಹೇಳಿದರು.
ಅಧಿಕೃತವಾಗಿ ಕತ್ತಿ ಹಬ್ಬ ಆಚರಣೆಗೆ ಯಜಮಾನರಾಗಿ ಅಣ್ಣಾದ್ರಯ್ಯ ಹಾಗೂ ಚಿಕ್ಕ ಯಜಮಾನರಾಗಿ ಕೃಷ್ಣಯ್ಯ ಅವರನ್ನು ದೇವಾಂಗ ಸಮಾಜದವರು, ಶೆಟ್ಟಿಗಾರರು ಹಾಗೂ ಸಂಬಂಧಪಟ್ಟ ಜನಾಂಗದ ಎಲ್ಲ ಮುಖಂಡರ ನೇತೃತ್ವದಲ್ಲಿ ನೇಮಕ ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ಚೌಡೇಶ್ವರಿ ಅಮ್ಮನವರ ಪ್ರಸಾದ ಪಡೆದು ಹಬ್ಬ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ಸಂಸದ ಸುನೀಲ್ ಬೋಸ್ ಅವರ ಸಮ್ಮುಖದಲ್ಲಿ ಕತ್ತಿ ಹಬ್ಬದ ಲಾಂಛನವನ್ನೂ ಸಹಾ ಬಿಡುಗಡೆ ಮಾಡಿ ಹಬ್ಬ ಮಾಡಲು ನಿರ್ಧರಿಸಲಾಗಿತ್ತು. ಆದರೆ ನಮ್ಮ ಸಮಾಜದ ಕೆಲವರು ಹೇಳುತ್ತಿರುವ ಪ್ರಕಾರ 10 ವರ್ಷಕ್ಕೆ ನಾವು ಹಬ್ಬ ಮಾಡುತ್ತಿಲ್ಲ. 2026 ಫೆಬ್ರವರಿ ತಿಂಗಳಿಗೆ 12 ವರ್ಷ ತುಂಬುತ್ತದೆ. ನಾಗರಾಜಯ್ಯ ಅವರ ಹೇಳಿಕೆಯಂತೆ ಅಧಿಕೃತವಾಗಿ ನಿಯಮಾಸುರ 12 ವರ್ಷಕ್ಕೆ ಹಬ್ಬ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ನಾಗರಾಜಯ್ಯ ಅವರನ್ನು ಬೆರಳೆಣಿಕೆಯಷ್ಟು ಜನರು ಮಾತ್ರ ಯಜಮಾನರಾಗಿ ನೇಮಕ ಮಾಡಿದ್ದಾರೆ. ಹಬ್ಬ ಆಚರಿಸಲು ಅನುಮತಿ ಕೋರಿ ಡಿವೈಎಸ್ಪಿ ಅವರಿಗೆ ಮೂರು ತಿಂಗಳ ಹಿಂದೆಯೇ ಮನವಿ ಪತ್ರ ಸಲ್ಲಿಸಿದ್ದೇವೆ. ಸರ್ಕಾರ ಅನುಮತಿ ಕೊಟ್ಟರೆ ಯಾವುದೇ ಕಾರಣಕ್ಕೂ ಹಬ್ಬವನ್ನು ನಿಲ್ಲಿಸುವುದಿಲ್ಲ. ಹಬ್ಬದ ವಂತಿಕೆ ಪಡೆಯಲು ಸಬ್ ರಿಜಿಸ್ಟ್ರಾರ್ ಆಫೀಸ್‌ನಲ್ಲಿ ಟ್ರಸ್ಟ್ ಅನ್ನು ರಿಜಿಸ್ಟರ್ ಮಾಡಿಸಿ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರಯಲಾಗಿದೆ. ಇಷ್ಟೆಲ್ಲ ಪ್ರಕ್ರಿಯೆ ನಡೆದಿರವಾಗ ನಾಗರಾಜಯ್ಯ ಹಾಗೂ ಅವರ ಬೆಂಬಲಿಗರು ಹಬ್ಬಕ್ಕೆ ಬೆಂಬಲ ನೀಡಿ ಚೌಡೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.