ಜಿಲ್ಲೆ

ಪ್ರತಿಯೊಬ್ಬರಿಂದ ಪರಿಸರ ಸಂರಕ್ಷಣೆಯಾಗಲಿ

ಬಸವರಾಜ ವೀರಪ್ಪ ಗರಗ

ಕುಮಟಾ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಅಗ್ರಣಿ ಬ್ಯಾಂಕ್ ಸಹಯೋಗದಲ್ಲಿ ಕೆನರಾ ಬ್ಯಾಂಕಿನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಸ್ಮರಣಾರ್ಥ 120ನೇ ವರ್ಷದ ಸ್ಥಾಪನೆ ದಿನದಂಗವಾಗಿ 120 ಗಿಡಗಳನ್ನು ನೆಡಲಾಯಿತು.

ಸಂಸ್ಥಾಪನಾ ದಿನದ ಕುರಿತು ಜಿಲ್ಲಾ ಅಗ್ರಣಿ ಬ್ಯಾಂಕ್​ನ ಎಲ್​ಡಿಎಂ ರಾಜಪ್ಪ ಗೌಳಿ ಮಾತನಾಡಿ, ಮುಂದಿನ ಪೀಳಿಗೆಗೋಸ್ಕರ ಮರಗಳನ್ನು ಬೆಳೆಸಿ ಪರಿಸರ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಈ ದಿಸೆಯಲ್ಲಿ ಎಲ್ಲರೂ ಪರಿಸರ ಸಂರಕ್ಷಣೆ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದರು.

ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆಯ ನಿರ್ದೇಶಕ ರಾಜು ಕಲ್ಲಪ್ಪ ಮಾತನಾಡಿ, ಬ್ಯಾಂಕ್ ತನ್ನ ಸಂಸ್ಥಾಪಕರ ಧ್ಯೇಯ ಮತ್ತು ಉದ್ದೇಶವನ್ನು ನೆನಪಿಸಿಕೊಳ್ಳುವುದರ ಜತೆಗೆ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಯಿತು. ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ, ಪ್ಲಾಸ್ಟಿಕ್ ಮುಕ್ತ ಸಮಾಜದ ನಿರ್ವಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯ. ಕಾಡಿದ್ದರೆ ನಾಡು, ನಾಡಿದ್ದರೆ ನಾವು. ಗಿಡ ಬೆಳೆಸಿ ಪರಿಸರ ಉಳಿಸುವ ಕೆಲಸ ಎಲ್ಲರಿಂದಾಗಬೇಕು ಎಂದರು.

ಕೆನರಾ ಬ್ಯಾಂಕ್​ನ ಕಾರವಾರ ಪ್ರಾದೇಶಿಕ ಕಚೇರಿಯ ಪ್ರಬಂಧಕ ಕಿರಣ ಬಗಾಡೆ,ಇತರರು ಉಪಸ್ಥಿತರಿದ್ದರು. ಕೆನರಾ ಬ್ಯಾಂಕ್ ಆರ್​ಸೆಟಿ ತರಬೇತಿ ಸಂಸ್ಥೆಯ ಸಿಬ್ಬಂದಿ, ತರಬೇತಿಗಳ ಸಂಪನ್ಮೂಲ ವ್ಯಕ್ತಿಗಳು, ಶಿಬಿರಾರ್ಥಿಗಳು ಇದ್ದರು.