ಸರಗೂರು: ಹಲವು ಕಾರಣಗಳಿಂದ ನಿಗದಿತ ವೇಗಕ್ಕಿಂತ ಹೆಚ್ಚು ಅಥವಾ ಕಡಿಮೆ ವೇಗದಲ್ಲಿ ರಕ್ತ ಹೃದಯದಿಂದ ಅಪಧಮನಿಗಳಿಗೆ ಪ್ರವಹಿಸಿದಾಗ ರಕ್ತದೊತ್ತಡ ಏರುಪೇರಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ತಾಲೂಕು ಪಂಚಾಯಿತಿ, ಎಚ್.ಡಿ.ಕೋಟೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ ಬಿ.ಮಟಕೆರೆ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಗ್ರಾಮ ಆರೋಗ್ಯ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಇನ್ಸುಲಿನ್ ಅವಲಂಬಿತ ಹಾಗೂ ದೇಹವು ಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡದೆ ಇರುವಾಗ ಸಕ್ಕರೆ ಅಂಶ ಹೆಚ್ಚಾಗುವುದು ಎಂಬ ಎರಡು ವಿಧದ ಸಕ್ಕರೆ ಕಾಯಿಲೆ ಇದೆ. ಮೆದೊಜೀರಕ ಗ್ರಂಥಿ ಇನ್ಸುಲಿನ್ ಉತ್ಪಾದಿಸಲು ವಿಫಲವಾದಾಗ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಸಣ್ಣ ವಯಸ್ಸಿನವರಲ್ಲಿ ಸಕ್ಕರೆ ಕಾಯಿಲೆ ಕಂಡುಬರುವುದು ಮೊದಲನೆಯ ವಿಧ. ಇನ್ನು ಸಾಮಾನ್ಯವಾಗಿ 45 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುವುದು ಎರಡನೇ ವಿಧ ಎಂದರು.
ಬಿ.ಮಟಕರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಆಧುನಿಕ ಕಾಲದಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಹೆಚ್ಚುತ್ತಿರುವ ಜನಸಂಖ್ಯೆ, ಮಾಲಿನ್ಯ ಮಟ್ಟ, ಹಾನಿಕಾರಕ ಅನಿಲಗಳ ಹೊರಸೂಸುವಿಕೆ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಂದ್ರ, ಪಿಡಿಒ ಭಾಗ್ಯಾ,ಅಂಗನವಾಡಿ ಮೇಲ್ವಿಚಾರಕಿ ಚಿನ್ನಮ್ಮ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರವಿರಾಜ್, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಭಾರತಿ ಜಿನ್ನಪ್ಪ , ಆರೋಗ್ಯ ಇಲಾಖೆ ಸಿಬ್ಬಂದಿ ಅನಿತಾ, ಜಲಾಜಾ , ಗ್ರಾಮ ಪಂಚಾಯಿತಿ ಸಿಬ್ಬಂದಿ ಮಹೇಶ್, ರಾಮು, ಸರಸ್ವತಿ, ಪಲ್ಲವಿ ಇತರರಿದ್ದರು.