ಉಪ್ಪಿನಬೆಟಗೇರಿ: ನಮ್ಮ ಸುತ್ತಲಿನ ವಾತಾವರಣ ಶುದ್ಧಿಯಾಗಲು ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಅವುಗಳ ಪೋಷಣೆ ಮಾಡಬೇಕು ಎಂದು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಸವಿತಾ ಅಮರಶೆಟ್ಟಿ ಹೇಳಿದರು.
ವಿಶ್ವ ಪರಿಸರ ದಿನ ಅಂಗವಾಗಿ ಉಪ್ಪಿನಬೆಟಗೇರಿ ವಲಯದ ಕಲ್ಲೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗುರುವಾರ ಹಮ್ಮಿಕೊಂಡಿದ್ದ ಶಾಲಾ ಆವರಣದಲ್ಲಿ ಸಸಿ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಮನೆ ಅಕ್ಕಪಕ್ಕದಲ್ಲಿ ಗಿಡಗಳನ್ನು ಬೆಳೆಸಿ ಸುಂದರ ಪರಿಸರದ ಜತೆಗೆ ಶುದ್ಧ ಗಾಳಿ ಪಡೆಯುವಂತಾಗಬೇಕು ಎಂದರು.
ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಅಶೋಕ ಕೆ. ಮಾತನಾಡಿ, ಪ್ರತಿಯೊಬ್ಬರೂ ಜನ್ಮ ದಿನವಾಗಲಿ ಅಥವಾ ಇನ್ನಾವುದೆ ಶುಭ ಸಮಾರಂಭದ ನೆನಪಿಗೋಸ್ಕರ ಒಂದೊಂದು ಗಿಡ ನೆಟ್ಟು ಅವುಗಳ ಪೋಷಣೆ ಮಾಡಬೇಕು ಎಂದರು.
ಮುಖ್ಯಾಧ್ಯಾಪಕ ಗೂಳಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಕೋಟಬಾಗಿ ಗ್ರಾಪಂ ಮಾಜಿ ಅಧ್ಯಕ್ಷ ಗುರುಪಾದಪ್ಪ ದಂಡಿನ, ಸದಸ್ಯರಾದ ಪುಷ್ಪಾ ಗುಗ್ರಿ, ಮಹಾದೇವಪ್ಪ ಶಿವಪ್ಪ ಇಂಚಲ, ಎಸ್ಡಿಎಂಸಿ ಸದಸ್ಯೆ ಮಂಜುಳಾ ಪಾಟೀಲ, ಒಕ್ಕೂಟದ ಮಾಜಿ ಅಧ್ಯಕ್ಷೆ ಚಿನ್ನವ್ವ ಪಾಟೀಲ, ನಿರ್ಮಲಾ ಜೋಗತಿ, ಗ್ರಾಮಸ್ಥರಾದ ಸುರೇಶ ಸುತಗಟ್ಟಿ, ನಿಂಗರಾಜ ಬೆಟಗೇರಿ, ಸೋಮಪ್ಪ ಗುಡಿಕಟ್ಟಿ ಇದ್ದರು. ಕೃಷಿ ಮೇಲ್ವಿಚಾರಕ ಪ್ರಭು ಹೀರೇಮಠ ಹಾಗೂ ವಲಯ ಮೇಲ್ವಿಚಾರಕಿ ಪಲ್ಲವಿ ಶೆಟ್ಟಿ ನಿರ್ವಹಿಸಿದರು.