ತಿ.ನರಸೀಪುರ ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಗೌರಿ ಶಂಕರಸ್ವಾಮಿ, ಮಹದೇವಸ್ವಾಮಿ, ದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಷಡಕ್ಷರಿ ದೇಶೀಕೇಂದ್ರ ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಪ್ರತಿಯೊಬ್ಬರೂ ಬಸವ ತತ್ವ ಪಾಲನೆ ಮಾಡುವಂತಾಗಲಿ

ಅಭಿನಯ್ ಎಚ್.ಎಂ

ತಿ.ನರಸೀಪುರ: ಮಾನವ ಸಮುದಾಯ ಬಸವಮಯವಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ಯುವ ಘಟಕ ಹಾಗೂ ಬಸವ ಬಳಗಗಳ ಸಹಯೋಗದಲ್ಲಿ ಮಂಗಳವಾರ ಪಟ್ಟಣದ ಮಹದೇವಪ್ಪ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಗ್ರಾಮಾಂತರ ಬಸವ ಜಯಂತಿ, ಸುತ್ತೂರು ರಾಜೇಂದ್ರ ಶ್ರೀಗಳು ಹಾಗೂ ಸಿದ್ಧಗಂಗಾ ಡಾ.ಶಿವಕುಮಾರ ಶ್ರೀಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪ್ರತಿಯೊಬ್ಬರೂ ಬಸವ ಶರಣರಾಗಬೇಕು. ನಾನು ಎಂದರೆ ಬಸವ ಶರಣ ಎನ್ನುವಂತಾಗಬೇಕು. ಬಸವ ತತ್ವದಲ್ಲಿ ಜಾತಿ ತಾರತಮ್ಯವಿಲ್ಲ. ಬದಲಾಗಿ ವೈಚಾರಿಕತೆ ಇದೆ. ಅಂತಹ ಬಸವ ತತ್ವವನ್ನು ನಾವೆಲ್ಲರೂ ಪಾಲನೆ ಮಾಡಿದಾಗ ಸಮುದಾಯ ಬಸವಮಯವಾಗುತ್ತದೆ ಎಂದರು.

ಜಾತ್ಯತೀತ ಸಮಾಜ, ಮಾನವೀಯತೆ, ಅನುಕಂಪ, ಪ್ರೀತಿಯ ಸಂದೇಶವನ್ನು ಬುದ್ಧ ಜಗತ್ತಿಗೆ ಸಾರಿದರು. ಅದನ್ನು ಅನುಸರಿಸಿದ ಬಸವಣ್ಣ ಮಾನವೀಯತೆ ಸಂದೇಶ ಸಾರಿ ಸಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದರು. ಜನರು ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಬಗ್ಗೆ ಅಧ್ಯಯನ ಮಾಡುತ್ತಾರೆ. ಆದರೆ ಅವರ ಆದರ್ಶಗಳನ್ನು ಪಾಲಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಸವಣ್ಣ ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ರೀತಿ, ನೀತಿಗಳನ್ನು ಬೋಧಿಸಿದ್ದರು. ಭಗವಂತ ಮತ್ತು ಭಕ್ತರ ನಡುವೆ ನೇರ ಸಂಬಂಧ ಇದೆ ಎಂಬುದನ್ನು ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದ್ದರು ಎಂದರು.

ಮಹದೇವಪ್ಪ ಸೂಪರ್ ಸಿಎಂ!: ಇದಕ್ಕೂ ಮುನ್ನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಎಂಎಲ್ ಹುಂಡಿ ಮಠಾಧ್ಯಕ್ಷರಾದ ಗೌರಿ ಶಂಕರಸ್ವಾಮಿ, ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಸಾಗುತ್ತಿರುವ ಧರ್ಮ ಲಿಂಗಾಯಿತ ಧರ್ಮ. ಶೈಕ್ಷಣಿಕ ಕ್ರಾಂತಿ ಮಾಡಿದ ರಾಜೇಂದ್ರ ಶ್ರೀಗಳ ಕಾರ್ಯ ಜಗತ್ತಿಗೆ ಮಾದರಿ ಎಂದರು.

ಪ್ರಸ್ತುತ ಸರ್ಕಾರದಲ್ಲಿ ಸೂಪರ್ ಸಿಎಂರಂತೆ ಕೆಲಸ ನಿರ್ವಹಿಸುತ್ತಿರುವ ಉಸ್ತುವಾರಿ ಸಚಿವ ಡಾ.ಮಹದೇವಪ್ಪ ಅವರು ಬುದ್ಧ, ಬಸವ, ಅಂಬೇಡ್ಕರ್ ಅವರ ಅನುಯಾಯಿಯಾಗಿದ್ದಾರೆ. ತಿ.ನರಸೀಪುರ ಪಟ್ಟಣದ ಜೋಡಿ ರಸ್ತೆಗೆ ರಾಜೇಂದ್ರ ಶ್ರೀಗಳ ವೃತ್ತ ಹಾಗೂ ಶಿವಕುಮಾರ ಶ್ರೀಗಳ ಹೆಸರು ಇಡಲು ಕ್ರಮ ವಹಿಸಬೇಕೆಂದು ಮನವಿ ಮಾಡಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಮಾತನಾಡಿದರು. ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾಡ್ರಹಳ್ಳಿ ಪಟ್ಟದ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮುಡುಕನಪುರ ಹಲವಾರ ಮಠದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ನಿಲಸೋಗೆ ಮಠದ ಮಲ್ಲಪ್ಪಸ್ವಾಮಿ, ಬಿಜೆಪಿ ಮುಖಂಡ ಡಾ.ರೇವಣ್ಣ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಪರಶಿವಮೂರ್ತಿ, ಖಜಾಂಚಿ ವಿ.ಎನ್.ಸಂದೇಶ್, ಯುವ ಘಟಕದ ಅಧ್ಯಕ್ಷ ಬಿ.ಎಂ. ವಿಜಯಕುಮಾರ್, ಉಪನ್ಯಾಸಕ ಕುಮಾರಸ್ವಾಮಿ, ನಿರ್ದೇಶಕರಾದ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಜಿಲ್ಲಾ ಯುವ ಘಟಕ ಕಾರ್ಯದರ್ಶಿ ಆಡಿಟರ್ ಮಂಜುನಾಥ್, ಕುರುಬೂರು ಶಿವು, ಪುರಸಭಾ ಸದಸ್ಯ ಕಿರಣ್, ಮಾಜಿ ಸದಸ್ಯ ಎನ್.ಲೋಕೇಶ್ ಇದ್ದರು.