ಜಿಲ್ಲೆ

ಪ್ರತಿಯೊಬ್ಬರೂ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲಿ

ಬಸವರಾಜ ವೀರಪ್ಪ ಗರಗ

ಉಪ್ಪಿನಬೆಟಗೇರಿ: ಮನುಷ್ಯನ ಶರೀರದಲ್ಲಿ ಕಣ್ಣು ಪ್ರಮುಖ ಆಂಗವಾಗಿದೆ. ಶರೀರ ರಕ್ಷಣೆ ಜತೆಗೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಶೀರಅಹ್ಮದ್ ಮಾಳಗಿಮನಿ ಹೇಳಿದರು.

ಗ್ರಾಮದ ಶ್ರೀ ಪರ್ವತ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಾಸನ್ ಐ ಕೇರ್, ಸೇವಾಭಾರತಿ ಟ್ರಸ್ಟ್ ಹಾಗೂ ಗ್ರಾಪಂ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬದಲಾದ ಆಹಾರ ಕ್ರಮ, ಅತಿಯಾದ ಟಿವಿ ಹಾಗೂ ಮೊಬೈಲ್​ಫೋನ್ ಬಳಕೆಯಿಂದ ಜನರ ಕಣ್ಣಿನ ಮೇಲೆ ಅಗಾಧ ದುಷ್ಪರಿಣಾಮ ಬೀರುತ್ತಿದೆ. ಅವಶ್ಯಕ್ಕೆ ಅನುಗುಣವಾಗಿ ಇವುಗಳ ಬಳಕೆ ಮಾಡಬೇಕು. ಕಣ್ಣಿನ ಸಮಸ್ಯೆಗಳು ಬಂದಾಗ ನಿಷ್ಕಾಳಜಿ ಮಾಡದೆ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಗ್ರಾಮೀಣ ಭಾಗದ ಜನರಿಗೆಂದು ಏರ್ಪಡಿಸುವ ಕಣ್ಣಿನ ಉಚಿತ ತಪಾಸಣೆಯ ಪ್ರಯೋಜನ ಪಡೆದು ಕಣ್ಣಿನ ರಕ್ಷಣೆಗೆ ಬದ್ಧವಾಗಿರಬೇಕು ಎಂದು ಸಲಹೆ ನೀಡಿದರು.

ಶಿಬಿರದಲ್ಲಿ ಸುಮಾರು 110ಕ್ಕೂ ಅಧಿಕ ಜನರ ಕಣ್ಣಿನ ತಪಾಸಣೆ ಜರುಗಿತು. ಧಾರವಾಡ ವಾಸನ್ ಐ ಕೇರ್ ಮಾರ್ಕೆಟಿಂಗ್ ಕಾರ್ಯ ನಿರ್ವಾಹಕ ಮಾರುತಿ ನಾಗರಹಳ್ಳಿ, ವಿಶಾಖಾ ಗಿರಿ, ಪ್ರವೀಣ ಕಾಂಬಳಿ, ದೇವೇಂದ್ರ ಸೂಲಿ, ಬಸಪ್ಪ ಬೆಳವಡಿ, ನಾಗಪ್ಪ ಬರಬರಿ, ಮಲ್ಲೇಶಪ್ಪ ಮಸೂತಿ, ಪರಪ್ಪ ಓಂಕಾರಿ, ಗಂಗಪ್ಪ ಮಡಿವಾಳರ, ರಾಜೇಸಾಬ ನದಾಫ್, ಶಿವಪ್ಪ ಮಸೂತಿ, ಪರಪ್ಪ ಹೆಬ್ಬಳ್ಳಿ, ಮಲ್ಲಪ್ಪ ಮಸೂತಿ, ದರ್ಶನ ಅಷ್ಟಗಿ, ರಾಜು ದಿವಟಗಿ ಹಾಗೂ ಗ್ರಾಮಸ್ಥರು ಶಿಬಿರದಲ್ಲಿ ಪಾಲ್ಗೊಂಡಿದ್ದರು.