ಹಾಸನ: ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಹೇಗೆ ಎಂಬುದು ನಮ್ಮ ಮುಂದಿನ ಸವಾಲಾಗಿದ್ದು, ಇದಕ್ಕೆ ಪ್ರತಿಯೊಬ್ಬ ಪ್ರಜೆಯೂ ಕೈ ಜೋಡಿಸಬೇಕು ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ (ಸ್ವಾಯತ್ತ) ಮಹಿಳಾ ದೌರ್ಜನ್ಯ ವಿರೋಧಿ ತಡೆ ಸಮಿತಿ ವತಿಯಿಂದ ಕಾಲೇಜಿನಲ್ಲಿ ಮೈತ್ರೇಯಿ ಮಹಿಳಾ ವೇದಿಕೆಯಿಂದ ಆಯೋಜಿಸಿದ್ದ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಟ್ಟಿದ ಮೇಲೆ ನಾವು ಏನನ್ನಾದರೂ ಸಾಧಿಸಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಬದಲಾವಣೆಗೆ ಪ್ರತಿಯೊಬ್ಬರು ಸಿದ್ದರಾಗಬೇಕು. ಯಾವುದೇ ಕೆಲಸವಾದರೂ ಶ್ರದ್ಧೆ, ನಿಷ್ಠೆ, ಸೇವೆ ಎಂಬುದು ಮುಖ್ಯವಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ಬದಲಾವಣೆಯ ಪುಟ ಬರೆಯಬೇಕಿರುವುದು ಯುವ ಜನಾಂಗವಾಗಿದೆ. ಕನಸು ಯಾವಾಗಲೂ ದೊಡ್ಡದಾಗಿರಬೇಕು. ಸಮಸಮಾಜದ ನಿರ್ಮಾಣಕ್ಕೆ ಲಿಂಗತಾರತಮ್ಯ ಇಲ್ಲದೆ ಒಗ್ಗೂಡಬೇಕಿದೆ. ಕಾನೂನನ್ನು ಅರಿತ ಮಹಿಳೆ ಶಕ್ತಳಾಗುತ್ತಾಳೆ. ಮಹಿಳೆಯರ ಸಂರಕ್ಷಣೆ ಇರುವಂತಹ ಮೊಬೈಲ್ ಅಪ್ಲಿಕೇಷನ್‌ಗಳನ್ನು ಕುರಿತು ಜಾಗೃತಿ ಮೂಡಿಸಿದರು. ಜ್ಞಾನವೇ ದೇವರು ಅಜ್ಞಾನವೇ ಸಾವು ಎಂಬ ಅಂಬೇಡ್ಕರ್ ವಾಕ್ಯವನ್ನು ನಮ್ಮಲ್ಲಿ ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಆರ್ಥಿಕವಾಗಿ ಸಬಲವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರಕ ನುಡಿಗಳನ್ನಾಡಿದರು.
ನಗರದ ಸೆನ್ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಎಂ.ಸಿ.ಮಧು ಮಾತನಾಡಿ, ಪೊಲೀಸ್ ಎಂಬುದು ಭಯ ಅಲ್ಲ ಭರವಸೆ. ವಿದ್ಯಾರ್ಥಿಗಳು ಮೊಬೈಲ್ ದಾಸರಾಗಬೇಡಿ. ಶ್ರಮದ ಓದಿನಿಂದ ಉತ್ತಮ ಫಲ ಸಾಧ್ಯವಾಗುತ್ತದೆ ಎಂದರು. ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ದೂರುಗಳನ್ನು ನೀಡಲು ಯಾವುದೇ ಭಯಪಡಬಾರದು ಬಂದ ದೂರುಗಳನ್ನು ನೀಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಂಶುಪಾಲ ಡಾ.ಎಂ.ಬಿ.ಇರ್ಷಾದ್ ಮಾತನಾಡಿ, ಪದವಿಯನ್ನು ಎಲ್ಲ ವಿಶ್ವವಿದ್ಯಾನಿಲಯಗಳು ನೀಡುತ್ತವೆ, ಸಂಸ್ಕಾರವನ್ನು ನೀಡುವ ಕೆಲಸ ಆಗಬೇಕು ಎಂದು ತಿಳಿಸಿದರು.
ಸಮಿತಿಯ ಸಂಚಾಲಕರಾದ ಡಾ.ಪ್ರಮೀಳಾ ಅವರು ಕಾರ್ಯಕ್ರಮ ಆಯೋಜಿಸಿ ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಗಣ್ಯರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ, ಅಪರ ಜಿಲ್ಲಾಧಿಕಾರಿ ಮಂಜುನಾಥ್, ಶೈಕ್ಷಣಿಕ ಡೀನ್ ರಾಜು ಡಿ.ಎಸ್, ಪರೀಕ್ಷಾ ನಿಯಂತ್ರಕರಾದ ಡಾ.ಕೆ.ಡಿ.ಮುರಳೀಧರ, ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ.ಸತ್ಯಮೂರ್ತಿ ಎಲ್ಲ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು ಇದ್ದರು.