ಕೊಟ್ಟೂರು: ಸಮಾನತೆ ಮತ್ತು ಭಾತೃತ್ವದ ಸಂದೇಶ ಸಾರುವ ಬಕ್ರೀದ್ ಹಬ್ಬವನ್ನು ಪಟ್ಟಣದ ಈದ್ಗಾ ಮೈದಾನದಲ್ಲಿ ಶನಿವಾರ ಆಚರಿಸಲಾಯಿತು.
ಧರ್ಮಗುರು ಮುಪ್ತಿ ಮಹಮ್ಮದ್ ಯಾಸೀನ್ ಪ್ರಾರ್ಥನೆ ಮತ್ತು ಪ್ರವಚನ ಬೋಧಿಸಿ ಮಹಮ್ಮದ್ ಪೈಗಂಬರ್ ಅವರ ಬದುಕಿನ ಮಾನವೀಯತೆಯನ್ನು ನೀವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕುರಾನ್‌ನಲ್ಲಿರುವ ಮಾನವೀಯ ಅಂಶಗಳನ್ನು ಬೋಧಿಸಿ, ಮಹಮ್ಮದ್ ಪೈಂಗಬರರ ತತ್ವ, ಆದರ್ಶ, ಪರಸ್ಪರ ಹೊಂದಾಣಿಕೆ, ಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಮುಸ್ಲಿಂ ಧರ್ಮದ ಸಮಾನತೆಗೆ ಸಂಕೇತವಾಗಬೇಕು ಎಂದರು.
ಪಪಂ ನಿವೃತ್ತ ಮುಖ್ಯಾಧಿಕಾರಿ ನೂರುಲ್ಲಾ ಖಾನ್, ಬಾಗಳಿ ಹಸೇನ್ ಸಾಹೇಬ್, ತಟಗಾರ್ ಖಸಿಂ ಸಾಹೇಬ್ ಮುಂತಾದವರು ಮಾತನಾಡಿ, ಸಮಾನತೆ ಮತ್ತು ಭಾತೃತ್ವ ಸಾರುವ ಬಕ್ರೀದ್ ಹಬ್ಬಕ್ಕೆ ಅನ್ಯ ಧರ್ಮಿಯರ ಧರ್ಮಗುರುಗಳನ್ನು ಆಹ್ವಾನಿಸಿ ಪ್ರವಚನ ಮಾಡಿಸುವ ಬಗ್ಗೆ ಚಿಂತನೆ ಇದ್ದು, ಸಮುದಾಯದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.