ವಿಜಯವಾಣಿ ಸುದ್ದಿಜಾಲ ಧಾರವಾಡ
ಎಲ್ಲರಿಗೂ ಶಿಕ್ಷಣ, ಸಮಾನ ಅವಕಾಶಗಳು ಸಿಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹೋರಾಡಬೇಕಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
ತಾಲೂಕಿನ ಗುಳೇದಕೊಪ್ಪ ಗ್ರಾಮದಲ್ಲಿ ಶ್ರೀ ಈಶ್ವರ ಯುವಕ ಮಂಡಳದಿಂದ ಇತ್ತೀಚೆಗೆ ಆಯೋಜಿಸಿದ್ದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದ ಎಲ್ಲರೂ ಒಗ್ಗಟ್ಟಿನಿಂದ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಸುತ್ತಮುತ್ತಲಿನ ಗ್ರಾಮದ ಜನರು ಸೇರಿ ಇಂತಹ ಸುಂದರ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ನಾವೆಲ್ಲರೂ ಒಂದು ಎಂಬ ಭಾವನೆ ಎಲ್ಲರಲ್ಲೂ ಮೂಡುತ್ತದೆ ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿ. ಭರಮನಿ ಮಾತನಾಡಿ, ಶಾಂತಿಯುತವಾಗಿ ಗಣೇಶ ಹಬ್ಬ ಆಚರಿಸಬೇಕು. ಗುಳೇದಕೊಪ್ಪ ಗ್ರಾಮದಲ್ಲಿ ಎಲ್ಲರೂ ಸೇರಿ ಹಬ್ಬ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಈ ಗ್ರಾಮ ಇತರ ಗ್ರಾಮಗಳಿಗೆ ಆದರ್ಶವಾಗಿದೆ ಎಂದರು.
ಗುಳೇದಕೊಪ್ಪ ಗ್ರಾಮದ ಮಾಜಿ ಸೈನಿಕರು, ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಪಾಲಿಕೆ ಆಯಕ್ತ ಈಶ್ವರ ಉಳ್ಳಾಗಡ್ಡಿ, ರುದ್ರೇಶ ಗಾಳಿ, ತಾಪಂ ಮಾಜಿ ಉಪಾಧ್ಯಕ್ಷ ಶಿವಾಜಿ ಜಾಧವ, ಎಪಿಎಂಸಿ ಮಾಜಿ ಅಧ್ಯಕ್ಷ ವಿಠ್ಠಲ ಪಿರಗಾರ, ನಿವೃತ್ತ ಬಿಇಒ ಬಸವರಾಜ ಭೋಸಲೆ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಇತರರು ಇದ್ದರು.