ಜಿಲ್ಲೆ

ಕನ್ನಡಾಂಬೆಯ ಮಕ್ಕಳೆಂಬ ಭಾವನೆ ಎ್ಲರಲ್ಲೂ ಮೂಡಲಿ

ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಸಲಹೆ

 ನೆಲಮಂಗಲ : ನಾವೆಲ್ಲ ಕನ್ನಡಾಂಬೆಯ ಮಕ್ಕಳು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕಿದೆ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ನಗರದ ಪವಾಡ ಶ್ರೀಬಸವಣ್ಣ ದೇವರ ಮಠದಲ್ಲಿ ಶ್ರೀ ಬಸವೇಶ್ವರ ಆಂಗ್ಲ ಪ್ರೌಢಶಾಲೆಯಿಂದ ಶನಿವಾರ ಅಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಒನಕೆ ಓಬವ್ವ ಜಯಂತಿ, ಚಿತ್ರನಟ ಶಂಕರ್‌ನಾಗ್ ಜಯಂತಿ, ರಾಷ್ಟ್ರೀಯ ಹಾಲು ದಿನ, ಆರ್.ಸಿ.ವಿ.ರಾಮನ್ ಜಯಂತಿ ಹಾಗೂ ಗುರು ನಾನಕ್ ಜಯಂತಿಯಲ್ಲಿ ಮಾತನಾಡಿದರು.

ಇತಿಹಾಸ ಹೊಂದಿದ ನಾಡಿದ ಭಾಷೆ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ವಿಶೇಷ ಜ್ಞಾನ ನೀಡಬೇಕಾಗಿದೆ. ಕನ್ನಡ ಭಾಷೆಗೆ ಸಾಕಷ್ಟು ಮಹನೀಯರು ಕೊಡುಗೆ ನೀಡಿದ್ದಾರೆ. ಅದರಲ್ಲೂ ಅಟೋ ಚಾಲಕರಲ್ಲಿ ಕನ್ನಡಾಭಿಮಾನ ಬೆಳೆಸುವ ನಟ, ದಿವಂಗತ ಶಂಕರ್‌ನಾಗ್ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕೃತಿ ಮೈಗ್ಗೂಡಿಸಿಕೊಳ್ಳಬೇಕು. ಜತೆಗೆ ಹೈನುಗಾರಿಕೆಯನ್ನು ನಂಬಿ ಗ್ರಾಮೀಣ ಭಾಗದ ಲಕ್ಷಾಂತರ ಕುಟುಂಬಗಳು ಜೀವನ ಮಾಡುತ್ತಾ ಅರ್ಥಿಕವಾಗಿ ಸಬಲರಾಗುತ್ತಿದ್ದಾರೆ. ವಿಜ್ಞಾನ ಕ್ಷೇತ್ರಕ್ಕೆ ಸಿ.ವಿ.ರಾಮನ್ ಅವರ ಕೊಡುಗೆ ಅಪಾರವಾಗಿದ್ದು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಜತೆಗೆ ಚಿತ್ರದುರ್ಗದ ವೀರ ವನಿತೆ ಒನಕೆ ಒಬವ್ವ ಹೈದರಾಲಿಯ ಸೈನ್ಯದ ವಿರುದ್ಧ ಹೋರಾಡುವ ಮೂಲಕ ಶಕ್ತಿವಂತ ಮಹಿಳೆಯಾಗಿದ್ದಳೆ. ಅವರು ದೈರ್ಯವನ್ನು ಸ್ವಲ್ಪ ಪ್ರಮಾಣದಲ್ಲಿ ಹೆಣ್ಣು ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ರೈತ ಮಾರೇಗೌಡ, ಲಲಿತಾ, ಪ್ರಸನ್ನಮೂರ್ತಿ, ಅಟೋ ಚಾಲಕ ಸತೀಶ್, ರವಿ, ಶಾಲಾ ಮುಖ್ಯ ಕೆಂಪಣ್ಣ, ಶಿಕ್ಷಕರಾದ ಉಷಾ, ಅಜ್ಮದ್‌ಉನ್ನೀಸಾ, ಪ್ರದೀಪ್, ಚೈತ್ರಾ, ಶಶಿರೇಖಾ, ಮಂಜುನಾಥ್, ಚಂದ್ರಶೇಖರ್ ಉಪಸ್ಥಿತರಿದ್ದರು.

ಕನ್ನಡ ಭಾವನಾತ್ಮಕ ಭಾಷೆ

ಜಗತ್ತಿನ ಎಲ್ಲ ಭಾಷೆಗಳು ಸಂವಹನ ಮಾಧ್ಯಮವಾಗಿದ್ದರೆ, ಕನ್ನಡ ಭಾಷೆ ಭಾವನಾತ್ಮಕ ಭಾಷೆಯಾಗಿದೆ. ಕನ್ನಡದ ಮಣ್ಣಿನ ಕಣಕಣದಲ್ಲೂ ಸ್ವಾಭಿಮಾನ ತುಂಬಿದೆ. ಪ್ರಪಂಚದ ಎಲ್ಲ ಭಾಷಿಗರನ್ನು ಆಕರ್ಷಿಸುವ ಗುಣ ಕನ್ನಡಭಾಷೆಗಿದೆ. ಅನ್ಯಭಾಷೆಗಳನ್ನುಕಲಿಯಲು ಅಭ್ಯಂತರವಿಲ್ಲ, ಆದರೆ ಕನ್ನಡದಲ್ಲಿ ಮಾತನಾಡುವುದೇ ಅಗೌರವವೆಂದು ಭಾವಿಸುವುದು ತಪ್ಪು. ಪಾಲಕರು ಶಿಕ್ಷಣದಲ್ಲಿ ಅಂಕಗಳಿಗೆ ಪ್ರಾಮುಖ್ಯತೆ ನೀಡದೇ ಮ ಕ್ಕಳಲ್ಲಿ ಉತ್ತಮ ಸಂಸ್ಕೃತಿ ಸಂಸ್ಕಾರಗಳನ್ನು ಬಿತ್ತೆ ಬೆಳೆಸಬೇಕಿದೆ ಎಂದು ಹಿರಿಯ ಸಾಹಿತಿ ಬೈರಮಂಗಲ ರಾಮೇಗೌಡ ತಿಳಿಸಿದರು.ಶ್ರೀಸಿದ್ದಲಿಂಗಸ್ವಾಮೀಜಿ, ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ, ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆ ಅಧ್ಯಕ್ಷ ಬಿ.ನರಸಿಂಹಯ್ಯ ಇದ್ದರು.