ಜಿಲ್ಲೆ

ಪ್ರತಿಯೊಬ್ಬರೂ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲಿ

ಶಿರಹಟ್ಟಿ: ರಾಷ್ಟ್ರೀಯ ಸೇವಾ ಯೋಜನೆ (ಎನ್​ಎಸ್​ಎಸ್) ವಿದ್ಯಾರ್ಥಿಗಳು ನೇರವಾಗಿ ಸಮಾಜದೊಂದಿಗೆ ಸಂವಹನ ನಡೆಸುವ ವೇದಿಕೆಯಾಗಿದೆ. ಮಹಾತ್ಮ ಗಾಂಧೀಜಿಯವರು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದರು. ಅದು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಎಫ್.ಬಿ. ಪೂಜಾರ ಸರ್ಕಾರಿ ಪದವಿಪೂರ್ವ ಕಾಲೇಜ್​ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಶಿಬಿರಾರ್ಥಿಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಸವರಾಜ ಗಿರಿತಮ್ಮಣ್ಣವರ ಮಾತನಾಡಿ, ಸಮಾಜ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಪ್ರಕಾಶ ಮೇಟಿ ಮಾತನಾಡಿ, ಎನ್ನೆಸ್ಸೆಸ್​ನಂತಹ ಶಿಬಿರಗಳಿಂದ ಸ್ವಯಂಸೇವಕರು ನಾಗರಿಕ ಪ್ರಜ್ಞೆ ಮತ್ತು ಜವಾಬ್ದಾರಿ ಕಲಿಯುತ್ತಾರೆ ಎಂದರು.

ಭೂದಾನಿ ಪರಸಪ್ಪ ಪೂಜಾರ, ನಾಗರಾಜ ಲಕ್ಕುಂಡಿ, ಫಕೀರೇಶ ರಟ್ಟಿಹಳ್ಳಿ, ರಾಮಣ್ಣ ಕಂಬಳಿ, ಗೌತಮ ಕಪ್ಪತನವರ, ಶ್ರೀನಿವಾಸ ಕಪಟಕರ, ಇತರರಿದ್ದರು. ಲಿಂಗರಾಜ ಯತ್ನಳ್ಳಿ ಸ್ವಾಗತಿಸಿದರು. ಕೊಟ್ರಯ್ಯ ಹೊಂಬಾಳಿಮಠ ಹಾಗೂ ಎಸ್.ವೈ. ಮುಜಾವರ ಕಾರ್ಯಕ್ರಮ ನಿರ್ವಹಿಸಿದರು.