ಹಾನಗಲ್ಲ: ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದೇ ನಮ್ಮೆಲ್ಲರ ಹೊಣೆ. ಅದರಲ್ಲಿ ಪೊಲೀಸ್ ಹಾಗೂ ಗೃಹರಕ್ಷಕ ದಳದ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ, ಸಮಾಜದ ಋಣ ತೀರಿಸಬೇಕಿದೆ ಎಂದು ಹಾವೇರಿ ಜಿಲ್ಲಾ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎಲ್.ವೈ. ಶಿರಕೋಳ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಹಾವೇರಿ ಜಿಲ್ಲಾ ಗೃಹರಕ್ಷಕ ದಳದಿಂದ ಇತ್ತೀಚೆಗೆ ಆಯೋಜಿಸಿದ್ದ ಭಾರತ ಗೃಹರಕ್ಷಕ ದಳ ದಿನಾಚರಣೆ, ಉಚಿತ ಕಣ್ಣಿನ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಸಂದರ್ಭದಲ್ಲಿಯೂ ಎದೆಗುಂದದೇ ಕೆಲಸ ಮಾಡುವ ಜವಾಬ್ದಾರಿ ನಮ್ಮದು. ಎಲ್ಲ ವಿಷಯದಲ್ಲಿ ಶಿಸ್ತು, ಪರಿಶ್ರಮ ನಮಗೆ ಅತ್ಯವಶ್ಯಕ ಎಂದರು.
ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ ಮಾತನಾಡಿ, ರಕ್ತ ಯಾವುದೇ ಕಾರ್ಖಾನೆಯಲ್ಲಿ ತಯಾರಾಗಲು ಸಾಧ್ಯವಿಲ್ಲ. ಮನುಷ್ಯರೆ ಮನುಷ್ಯರ ಆರೋಗ್ಯಕ್ಕಾಗಿ ಮಾಡುವ ಅತ್ಯಂತ ಪವಿತ್ರ ಕಾರ್ಯ ರಕ್ತದಾನವಾಗಿದೆ ಎಂದರು.
ಜಿಲ್ಲಾ ಗೃಹರಕ್ಷಕ ದಳದ ಸಮಾಜೇಷ್ಟರಾದ ಪ್ರಮೋದ ನಲವಾಗಿಲ ಮಾತನಾಡಿ, ನಮ್ಮ ನಿತ್ಯ ಉದ್ಯೋಗ ವ್ಯವಹಾರಗಳ ನಡುವೆಯೂ ಸಮಾಜದ ಹಿತಕ್ಕಾಗಿ ಅಗತ್ಯ ಸಂದರ್ಭದಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜದ ಹಿತ ಕಾಪಾಡುವಲ್ಲಿ ಪಾಲುದಾರರಾಗಿದ್ದೇವೆ. ಎಲ್ಲ ಕಾಲಕ್ಕೂ ನಮ್ಮ ಸಿಬ್ಬಂದಿ ಸೇವೆಗೆ ಸನ್ನದ್ಧವಾಗಿರುತ್ತದೆ ಎಂದರು.
ತಾಪಂ ಇಒ ಪರಶುರಾಮ ಪೂಜಾರ, ಗೃಹರಕ್ಷಕ ದಳದ ತಾಲೂಕು ಘಟಕಾಧಿಕಾರಿಗಳಾದ ಸಿ.ಎಸ್. ಬೆಲ್ಲದ, ದೇವರಾಜ ಮ್ಯಾಗಲಮನಿ, ಇತರರಿದ್ದರು. 22 ಜನರು ರಕ್ತದಾನ ಮಾಡಿದರು. ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ವತಿಯಿಂದ 53 ಸಿಬ್ಬಂದಿ ಉಚಿತ ನೇತ್ರ ತಪಾಸಣೆ ನಡೆಸಲಾಯಿತು. 16 ಜನರಿಗೆ ಶಸ್ತ್ರ ಚಿಕಿತ್ಸೆಗೆ ಸಲಹೆ ಮಾಡಲಾಯಿತು. ಅಕ್ಕಿಆಲೂರು ಘಟಕಾಧಿಕಾರಿ ಸಿ.ಎಸ್. ಬೆಲ್ಲದ ಹಾಗೂ ಹಾನಗಲ್ಲ ಘಟಕಾಧಿಕಾರಿ ದೇವರಾಜ ಮ್ಯಾಗಲಮನಿ ಕಾರ್ಯಕ್ರಮ ನಿರ್ವಹಿಸಿದರು.