ಅಳ್ನಾವರ: ಉತ್ತಮ ಸಂಸ್ಕಾರಗಳಿಂದ ಜೀವನ ಸಾಕಾರಗೊಳಿಸಲು ಸಾಧ್ಯವಿದೆ ಎಂದು ಬೀಳಕಿ ಅವರೊಳ್ಳಿಯ ರುದ್ರಸ್ವಾಮಿಮಠದ ಚನ್ನಬಸವ ದೇವರು ಸ್ವಾಮೀಜಿ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಪಟ್ಟಣದಲ್ಲಿ ವೀರಶೈವ ಸಮಾಜ ಹಾಗೂ ಅಕ್ಕ ಮಹಾದೇವಿ ಮಹಿಳಾ ಮಂಡಳದ ಆಶ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಮಹಾತ್ಮರ ಜೀವನ ದರ್ಶನ’ ಪ್ರವಚನದ ಮಂಗಲೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.
ತಂದೆ-ತಾಯಿ ಹಾಗೂ ಗುರು, ಹಿರಿಯರನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಅವರ ಸೇವೆ ಮಾಡುವ ಮಕ್ಕಳು ಜೀವನದಲ್ಲಿ ಸಾಧಕರು ಎನಿಸಿಕೊಳ್ಳುತ್ತಾರೆ. ಸಂಸ್ಕಾರದ ಸಂಗತಿಗಳ ಅರಿವು ಮುಖ್ಯ. ವಿದ್ಯೆಗಿಂತ ವಿವೇಕವೂ ಮಹತ್ವದ್ದಾಗಿರುತ್ತದೆ ಎಂಬುದನ್ನು ಪಾಲಕರು ಮಕ್ಕಳಿಗೆ ತಿಳಿ ಹೇಳಬೇಕು ಎಂದರು.
ದೇಶದ ಸಮೃದ್ಧತೆಗೆ ಭೇದ-ಭಾವಗಳನ್ನು ತೊರೆದು ಏಕತೆಯಿಂದ ಜೀವನ ಸಾಗಿಸುವಂತಾಗಬೇಕು. ಎಲ್ಲರೂ ಸೇವೆಯ ಮನೋಭಾವ ಹೆಚ್ಚಿಸಿಕೊಂಡು ಬದುಕು ನಡೆಸುವಂತಾಗಬೇಕು ಎಂದರು.
ಪ್ರವಚನಕಾರ ಕೊಪ್ಪಳದ ದೊಟ್ಟಿಹಾಳದ ಚಂದ್ರಶೇಖರ ದೇವರು ಮಾತನಾಡಿ, ಪ್ರತಿಯೊಬ್ಬರೂ ಮಹಾತ್ಮರ ಜೀವನ ಸಂದೇಶಗಳನ್ನು ಅರಿತು ಸುಂದರ ಬದುಕನ್ನು ಸಾಗಿಸಬೇಕು ಎಂದರು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಸ್.ಬಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಎಸ್.ಜಿ. ಜಕಾತಿ, ಬಸಯ್ಯಾ ಹಿರೇಮಠ, ಬಿ.ವಿ. ಹಟ್ಟಿಹೋಳಿ, ವಿ.ಬಿ. ಲಿಂಗಣ್ಣಮಠ, ಶ್ರೀಕಾಂತ ಪಗಡಿ, ಸೋಮಶೇಖರ ಅಂಬಡಗಟ್ಟಿ, ಮಹಾಂತೇಶ ಮದ್ನಳ್ಳಿ, ಲಿಂಗರಾಜ ಮೂಲಿಮನಿ, ಬಸಣ್ಣ ಸವದತ್ತಿ, ಚನ್ನಬಸಪ್ಪ ಕಿತ್ತೂರ, ಅನ್ನಪೂರ್ಣಾ ಕೌಜಲಗಿ, ಸುಮಾ ಸೊಪ್ಪಿ, ಅನ್ನಪೂರ್ಣಾ ಮದ್ನಳ್ಳಿ ಇತರರಿದ್ದರು.