ಜಿಲ್ಲೆ

ಎಲ್ಲರೂ ಅರಣ್ಯ ಅಭಿವೃದ್ಧಿಗೆ ಕೊಡುಗೆ ನೀಡಲಿ

ಬಸವರಾಜ ವೀರಪ್ಪ ಗರಗ

ಶಿರಸಿ: ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಅರಣ್ಯ ಇಲಾಖೆ ಜೊತೆಗೂಡಿ ಹವಾಮಾನ ವೈಪರೀತ್ಯಗಳನ್ನು ತಾಳಿಕೊಳ್ಳುವ ಸಸ್ಯ ಪ್ರಬೇಧಗಳು, ಅರಣ್ಯ ನಿರ್ವಣದಂತಹ ಸಂಶೋಧನೆ ಮತ್ತು ಯೋಜನೆಯಲ್ಲಿ ತೊಡಗಿಕೊಂಡು ಹೊಸ ಆವಿಷ್ಕಾರಗಳ ಮೂಲಕ ಅರಣ್ಯ ಅಭಿವೃದ್ಧಿಗೆ ಕೊಡುಗೆ ಸಲ್ಲಿಸಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ. ರವಿ ಹೇಳಿದರು.

ನಗರದಲ್ಲಿ ಗುರುವಾರದಿಮದ ಆಯೋಜಿಸಿರುವ ಎರಡು ದಿನಗಳ ‘ಪರಿಸರ ವ್ಯವಸ್ಥೆಯ ಪುನರ್​ಸ್ಥಾಪನೆ, ಸುಸ್ಥಿರ ಬಳಕೆ ಮತ್ತು ಸಮುದಾಯ ಅಭಿವೃದ್ಧಿಗಾಗಿ ಅರಣ್ಯದ ನಿರ್ವಣ’ ಎಂಬ ವಿಷಯದ ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಪಶ್ಚಿಮ ಘಟ್ಟದ ಕಾಡುಗಳನ್ನು ಉಳಿಸಿಕೊಳ್ಳಬೇಕಾದ ಅಗತ್ಯತೆ, ಜವಾಬ್ದಾರಿ ಪ್ರತಿಯೊಬ್ಬನ ಮೇಲಿದೆ. ರಾಜ್ಯದ ಒಣ ಪ್ರದೇಶಗಳಲ್ಲಿ ಅರಣ್ಯ ಮತ್ತು ಸಾಮಾಜಿಕ ಅರಣ್ಯಗಳನ್ನು ಬೆಳೆಸುವಲ್ಲಿ ಹಾಗೂ ನಗರ ಅರಣ್ಯದ ಸಫಲತೆಯಲ್ಲಿ ರೈತರ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದೆ ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಮಾತನಾಡಿ, ಹವಾಮಾನ ವೈಪರೀತ್ಯ ನಿವಾರಿಸುವ ನಿಟ್ಟಿನಲ್ಲಿ ನೀರು ಮತ್ತು ಮಣ್ಣು ಮಹತ್ವ ವಹಿಸುತ್ತವೆ. ಈ ಎರಡು ದಿನಗಳ ಸಂಕಿರಣದಲ್ಲಿ ಭಾಗವಹಿಸುವ ವಿಜ್ಞಾನಿಗಳು, ವಿದ್ಯಾರ್ಥಿಗಳು, ಶಿಕ್ಞಕರು, ಅರಣ್ಯ ಇಲಾಖೆಯ ಸಿಬ್ಬಂದಿಯ ವಿಚಾರ ಮಂಥನದ ಮೂಲಕ ಹೊರಹೊಮ್ಮುವ ಚರ್ಚಾ ಫಲಿತಾಂಶವನ್ನು ಶಿಫಾರಸುಗಳ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ. ಶರತ್ ಅನಂತಮೂರ್ತಿ ವಿಚಾರ ಸಂಕಿರಣದ ಸಂಕಲನಾ ಪುಸ್ತಕವನ್ನು ಬಿಡುಗಡೆಗೊಳಿಸಿ, ಅರಣ್ಯನಾಶ ಮತ್ತು ಹವಾಮಾನ ವೈಪರೀತ್ಯದ ಬಗೆಗಿನ ಅರಿವು ಸಾಮಾನ್ಯ ನಾಗರಿಕರನ್ನು ತಲುಪಬೇಕು ಎಂದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ ಮಾತನಾಡಿ, ಹವಾಮಾನ ಬದಲಾವಣೆ ನಿವಾರಿಸುವಲ್ಲಿ ನಿಸರ್ಗಾಧಾರಿತ ಪರಿಹಾರಗಳನ್ನು ಕಂಡುಕೊಳ್ಳಲು ಈ ರೀತಿಯ ವಿಚಾರ ಸಂಕಿರಣಗಳು ಸಹಾಯಕವಾಗುತ್ತವೆ ಎಂದರು.

ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಡಿಎಫ್​ಒ ಡಾ. ಅಜ್ಜಯ್ಯ ಜೆ.ಆರ್., ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಆರ್. ವಾಸುದೇವ, ಇತರರಿದ್ದರು. ದೇಶದ ವಿವಿಧ ರಾಜ್ಯಗಳ 120ಕ್ಕೂ ಹೆಚ್ಚು ವಿಜ್ಞಾನಿಗಳು, ಸಂಶೋಧನಾ ವಿದ್ಯಾರ್ಥಿಗಳು, ಅರಣ್ಯ ನೀತಿ ಪರಿಣತರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಳಿಕ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಭೂಕುಸಿತ, ಮರಗಳ ಮರಣ ಮುಂತಾದ ವಿಷಯಗಳ ಬಗೆಗೆ ವಿವರವಾದ ಚರ್ಚೆ ನಡೆಯಬೇಕು. ಸರ್ಕಾರಗಳು ತಂದ ಹಲವಾರು ಯೋಜನೆಗಳ ಮೂಲಕ ಈ ಬದಲಾವಣೆಯ ವಿರುದ್ಧ ಪ್ರಗತಿ ಸಾಧಿಸುವಂತಾಗಬೇಕು. | ವಸಂತ ರೆಡ್ಡಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೆನರಾ ವೃತ್ತ