ಜಿಲ್ಲೆ

ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಪಣ ತೊಡಬೇಕಿದೆ. ಇಲ್ಲವಾದರೆ, ಭವಿಷ್ಯದಲ್ಲಿ ಪರಿಸರ ಮಾಲಿನ್ಯದಿಂದ ತತ್ತರಿಸಬೇಕಾಗುತ್ತದೆ ಎಂದು ಕವಯಿತ್ರಿ ಡಾ.ಲತಾ ರಾಜಶೇಖರ್ ಹೇಳಿದರು.


ಅದಮ್ಯ ರಂಗಶಾಲೆ ವತಿಯಿಂದ ಜಯಲಕ್ಷ್ಮೀಪುರಂನ ಶ್ರೀ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಗಾಂಧಿ ಸದ್ಭಾವನೆ’ ಮತ್ತು ‘ಅದಮ್ಯ ಚೇತನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಇಡೀ ಜಗತ್ತನ್ನು ಪರಿಸರ ಮಾಲಿನ್ಯ ತೀವ್ರವಾಗಿ ಕಾಡಲು ಶುರು ಮಾಡಿದೆ. ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಮಿತಿ ಮೀರಿದೆ. ಬೆಂಗಳೂರಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಅಪಖ್ಯಾತಿಕ್ಕೀಡಾಗಿದೆ. ವಾಸಿಸುವ ತಾಣ ಉತ್ತಮವಾಗಿದ್ದರೆ ಸಕಲ ಜೀವಿಗಳ ಬದುಕು ಗುಣಮಟ್ಟದಿಂದ ಕೂಡಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಬೇಕು ಎಂದರು.


ಅಂಕಣಕಾರ ಜಿ.ಎಲ್.ತ್ರಿಪುರಾಂತಕ, ಮಂಡ್ಯದ ಅನಿಕೇತನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ರಾಮಲಿಂಗಯ್ಯ ಮತ್ತು ಪುಣ್ಯಕೋಟಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಹನುಮಂತೇಶ್ ಅವರಿಗೆ ಗಾಂಧಿ ಸದ್ಭಾವನ ಪ್ರಶಸ್ತಿ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಎಚ್.ಎಸ್. ಪ್ರನುಶ, ರಾಮನಗರದ ಆರ್.ಕಿರಣ್, ಕೆ.ಆರ್.ಪೇಟೆಯ ಎಸ್.ಎಂ. ಅನನ್ಯ ಅವರಿಗೆ ‘ಅದಮ್ಯ ಚೇತನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಮ.ಗು.ಸದಾನಂದಯ್ಯ, ಅದಮ್ಯ ರಂಗ ಶಾಲೆಯ ಗೌರವ ಕಾರ್ಯದರ್ಶಿ ಟಿ.ಸತೀಶ್‌ಜವರೇಗೌಡ, ಜೆಎಸ್‌ಎಸ್ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಮಾಧಿಕಾರಿ ಎನ್.ಸಂತೋಷ್ ಕುಮಾರ್ ಇದ್ದರು.