ಜಿಲ್ಲೆ

ಎಲ್ಲರೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಲಿ

ಮುಂಡಗೋಡ: ಬಡವರಷ್ಟೇ ಅಲ್ಲ, ಶ್ರೀಮಂತರೂ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವಂತಿರಬೇಕು. ಹೀಗಾಗಿ ಎಲ್ಲ ಬಗೆಯ ಮೂಲಸೌಲಭ್ಯಗಳನ್ನು ಆಸ್ಪತ್ರೆಗೆ ಒದಗಿಸಲಾಗುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗುರುವಾರ ಏರ್ಪಾಟಾಗಿದ್ದ ಬ್ಲಾಕ್ ಪಬ್ಲಿಕ್ ಹೆಲ್ತ್ ಯುನಿಟ್ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಬಡವರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇರುವುದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಗಳು ಒಂದೇ ಸೂರಿನಡಿ ಸಿಗಲು ಉನ್ನತ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತಿದೆ. ಮನುಷ್ಯನ ಆರೋಗ್ಯದ ಜತೆಗೆ ಆಸ್ಪತ್ರೆ ಆರೋಗ್ಯವೂ ಯೋಚನೆ ಮಾಡಬೇಕಾಗಿದೆ. ಆಸ್ಪತ್ರೆ ಆರೋಗ್ಯವಂತಾಗಿದ್ದರೆ ಮಾತ್ರ ಮನುಷ್ಯನ ಆರೋಗ್ಯ ಸರಿಯಾಗಿರಲು ಸಾಧ್ಯವಾಗುತ್ತದೆ ಎಂದರು.

ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಆಸ್ಪತ್ರೆಯ ಮೂಲಸೌಲಭ್ಯಗಳಿಗೆ ಸರ್ಕಾರ ನಿರಂತರವಾಗಿ ಅನುದಾನ ನೀಡುತ್ತಿದ್ದು, ಸರ್ಕಾರಿ ಆಸ್ಪತ್ರೆ ಕೇವಲ ಬಡವರಿಗೆ ಎನ್ನುವಂತಿತ್ತು. ಆದರೆ, ಶ್ರೀಮಂತರು ಸಹ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯುವಂತಾಗಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದಕ್ಕೂ ಮುನ್ನ ಶಾಸಕ ಶಿವರಾಮ ಹೆಬ್ಬಾರ ತಾಲೂಕಿನ ಬಾಚಣಕಿ ಗ್ರಾಮದ ಕೆರೆಯನ್ನು ಮನುವಿಕಾಸ ಸಂಸ್ಥೆಯಿಂದ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ಪ.ಪಂ. ಅಧ್ಯಕ್ಷೆ ಜಯಸುಧಾ ಭೋವಿ, ತಾಪಂ ಅಧಿಕಾರಿ ಟಿ.ವೈ. ದಾಸನಕೊಪ್ಪ, ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸ್ವರೂಪರಾಣಿ ಪಾಟೀಲ, ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಮುಖ್ಯಾಧಿಕಾರಿ ಚಂದ್ರಶೇಖರ ಬಿ., ಕೃಷ್ಣ ಹಿರಳ್ಳಿ, ಸಿದ್ದಪ್ಪ ಹಡಪದ, ಎಚ್.ಎಂ. ನಾಯ್ಕ, ನಜೀರಹ್ಮದ್ ದರ್ಗಾವಾಲೆ ಹಾಗೂ ಪಪಂ ಸದಸ್ಯರು ಇದ್ದರು.