ಜಿಲ್ಲೆ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಗುರಿಯಾಗಲಿ

ಬಸವರಾಜ ವೀರಪ್ಪ ಗರಗ

ಶಿಗ್ಗಾಂವಿ: ಪ್ರಕೃತಿ ನಮ್ಮನ್ನು ಕಾಪಾಡುವ ತಾಯಿಯಂತೆ. ನಮ್ಮ ಜೀವನಕ್ರಮಕ್ಕೆ ಬೇಕಾದ ಆಮ್ಲಜನಕ, ಶುದ್ಧ ಪರಿಸರ ಎಲ್ಲವನ್ನೂ ನೀಡಿದೆ. ಅದನ್ನು ಸಂರಕ್ಷಣೆ ಮಾಡುವುದು ನಮ್ಮ ಗುರಿಯಾಗಬೇಕು ಎಂದು ಪಟ್ಟಣದ ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶೆ ಅಶ್ವಿನಿ ಚಂದ್ರಕಾಂತ ಹೇಳಿದರು.

ಪಟ್ಟಣದ ತಾಪಂ ಆವರಣದಲ್ಲಿ ಶನಿವಾರ ವನಮಹೋತ್ಸವ ನಿಮಿತ್ತ ಸಸಿಗಳನ್ನು ನೆಟ್ಟು ನಂತರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಕೃತಿ ರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಇದು ಸಾಮಾಜಿಕ ಜವಾಬ್ದಾರಿಯೂ ಹೌದು. ಪ್ರಕೃತಿಯಿಂದ ಸಾಕಷ್ಟು ಲಾಭ ಪಡೆದುಕೊಂಡಿದ್ದೇವೆ. ಪರಿಸರಕ್ಕಾಗಿ ದಿನದ ಸ್ಪಲ್ಪ ಸಮಯ ವ್ಯಯಸಿದರೆ ಇನ್ನಷ್ಟು ಉತ್ತಮವಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.

ಮಕ್ಕಳು ಮತ್ತು ಶಿಕ್ಷಕರು ಶಾಲಾ ಆವರಣದಲ್ಲಿ ತರಕಾರಿ ಬೆಳೆಯುವ ಕೈತೋಟ, ಹೂವು ಹಣ್ಣುಗಳ ಸಸಿಗಳನ್ನು, ಸರ್ಕಾರಿ ಕಾರ್ಯಾಲಯದ ಮುಂಭಾಗದ ಬಯಲು ಜಾಗದಲ್ಲಿ ನೆರಳು ನೀಡುವ ಮರಗಳು, ಆಸ್ಪತ್ರೆ ಆವರಣಗಳು ಸಮುದಾಯ ಬಯಲು ಜಾಗಗಳು ಗಿಡ- ಮರಗಳಿಂದ ಅಲಂಕೃತವಾಗಬೇಕು. ಇದರಿಂದ ಪ್ರಕೃತಿ ಆಕ್ಸಿಜನ್ ರೂಪದಲ್ಲಿ ನಮ್ಮೆಲ್ಲರನ್ನೂ ರಕ್ಷಿಸುತ್ತದೆ ಎಂದರು.

ತಾಪಂ ಇಒ ಪಿ. ವಿಶ್ವನಾಥ, ಅರಣ್ಯ ಇಲಾಖೆ ಅಧಿಕಾರಿ ಸುರೇಶ ಕುಳ್ಳಳ್ಳಿ ಮಾತನಾಡಿದರು. ನೃಪತಿ ಬೂಸರೆಡ್ಡಿ, ಸುರೇಶ ತೆಗ್ಗಿಹಳ್ಳಿ, ಸಿ.ಎಂ. ಕೋರಿ, ರಾಯಪ್ಪ ನಾಗಪ್ಪನವರ, ಮಾದೇವ ಹೂಗಾರ, ಮಾರುತಿ ಕುಂದರಗಿ, ಇತರರಿದ್ದರು.