ಜಿಲ್ಲೆ

ಶಿಕ್ಷಣ ಸೃಜನಾತ್ಮಕ ಕ್ರಿಯೆಗೆ ಉತ್ತೇಜನ ನೀಡಲಿ

ಬಸವರಾಜ ವೀರಪ್ಪ ಗರಗ

ಹೊನ್ನಾವರ: ಪಠ್ಯಕಲಿಕೆ ಕೇವಲ ಬಾಯಿಪಾಠದ ಶಿಕ್ಷಣವಾಗದೆ ಅದು ವಿದ್ಯಾರ್ಥಿಯಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಬೇಕು. ಅದು ವಿದ್ಯಾರ್ಥಿಯ ಮನಸನ್ನು ವಿಕಸನಗೊಳಿಸಿ ಸೃಜನಾತ್ಮಕ ಕ್ರಿಯೆಗೆ ಉತ್ತೇಜನ ನೀಡಬೇಕು ಎಂದು ಕುಮಟಾದ ಇಂಗ್ಲಿಷ್ ಉಪನ್ಯಾಸಕಿ ಡಾ. ಪ್ರತಿಭಾ ಭಟ್ಟ ಅಭಿಪ್ರಾಯಪಟ್ಟರು.

ಇಲ್ಲಿಯ ಎಸ್​ಡಿಎಂ ಪದವಿ ಕಾಲೇಜ್ ಇಂಗ್ಲಿಷ್ ವಿಭಾಗದ ವತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈಬರಹ ಪತ್ರಿಕೆ ‘ಬ್ಲೂಮ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇದ್ದು ಸ್ವತಂತ್ರವಾಗಿ ಬದುಕು ರೂಪಿಸಿಕೊಳ್ಳಲು ಅವರು ಅಗತ್ಯ ಪ್ರಯತ್ನ ನಡೆಸಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ ಮಾತನಾಡಿ, ಕೈಬರಹ ಪತ್ರಿಕೆಯಿಂದ ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಬೆಳೆಯುತ್ತದೆ’ ಎಂದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಎಂ.ಜಿ. ಹೆಗಡೆ ಭಾಗವಹಿಸಿದ್ದರು.

ಉಪನ್ಯಾಸಕಿ ವೆಲೆನ್ಶಿಯಾ ಡಿಸೋಜಾ ಸ್ವಾಗತಿಸಿದರು. ಉಪನ್ಯಾಸಕಿ ಕೆ.ಆರ್. ಶ್ರೀಲತಾ ಅತಿಥಿ ಪರಿಚಯ ಮಾಡಿದರು. ವೈಶಾಲಿ ಹೆಗಡೆ, ಪೂರ್ಣಿಮಾ ಗೌಡ ಹಾಗೂ ಇಂಗ್ಲಿಷ್ ಲಿಟರರಿ ಕ್ಲಬ್ ಕಾರ್ಯದರ್ಶಿ ಸಹನಾ ಅಂಬಿಗ ಕಾರ್ಯಕ್ರಮ ನಿರ್ವಹಿಸಿದರು.