ಮೈಸೂರು: ಯಾವುದೇ ನಾಟಕಗಳು ಉತ್ತಮ ಸಂದೇಶ ನೀಡುವ ಮೂಲಕ ಸಮಾಜಮುಖಿಯಾಗಿ ಬೆಳೆಯಬೇಕು ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಹೇಳಿದರು.
ನಗರದ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಅರಳಿ’ ರಂಗತಂಡದ ಉದ್ಘಾಟನೆ ಹಾಗೂ ಡಾ.ಸಿ.ರವೀಂದ್ರನಾಥ್ ರಚನೆಯ ‘ಉರುವಿ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾನಾ ರಂಗತಂಡಗಳು ಕಾರ್ಯನಿರ್ವಹಿಸುತ್ತಾ, ನಾಟಕಗಳನ್ನು ಪ್ರದರ್ಶಿಸಿಕೊಂಡು ಬರುತ್ತಿವೆ. ಆದರೆ ರಂಗತಂಡಗಳು ತಾವು ಪ್ರದರ್ಶಿಸುವ ನಾಟಕಗಳಿಂದ ಉತ್ತಮ ಸಂದೇಶ ನೀಡುವ ಮೂಲಕ ಸಮಾಜಮುಖಿಯಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.
‘ಉರುವಿ’ ನಾಟಕದ ರಚನೆಕಾರ ರವೀಂದ್ರನಾಥ್ ಅವರು ತಮ್ಮ ಕಾಲೇಜು ವೃತ್ತಿಯ ನಡುವೆಯೂ ಸಾಹಿತ್ಯದ ಆಸಕ್ತಿಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಜಪಾನಿನ ಹಾಯ್ಕುಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಟಕವನ್ನು ರಚಿಸಿ ಹೊಸ ತಂಡದ ಮೂಲಕ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತ್ಯ ಕೃಷಿ ಮತ್ತು ರಂಗತಂಡದ ಚಟುವಟಿಕೆಗಳು ನಿರಂತರವಾಗಿ ಸಾಗಬೇಕು. ಇನ್ನೂ ಹತ್ತು-ಹಲವು ನಾಟಕಗಳು ರಚನೆಯಾಗಿ ರಂಗ ಪ್ರದರ್ಶನ ಕಾಣಬೇಕು ಎಂದು ಆಶಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ರಂಗಭೂಮಿಯ ಸ್ಪರ್ಶ ದೊರೆತರೆ ಸಂಸ್ಕಾರ ಲಭ್ಯವಾಗುತ್ತದೆ ಎಂಬ ಮಾತಿಗೆ ಪೂರಕವಾಗಿ ಉತ್ಸಾಹಿ ಯುವಜನರು ಅರಳಿ ರಂಗತಂಡ ಕಟ್ಟಿದ್ದಾರೆ. ಈ ತಂಡವು ಹೊಸ-ಹೊಸ ನಾಟಕಗಳನ್ನು ರಂಗಭೂಮಿಯಲ್ಲಿ ನಿರಂತರವಾಗಿ ಪ್ರದರ್ಶನ ನೀಡುವಂತೆ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.
ರಂಗ ಕಲಾವಿದೆ ಗೀತಾ ಮೋಂಟಡ್ಕ ಮಾತನಾಡಿ, ಪ್ರಸ್ತುತ ‘ರಂಗ ತಂಡ ಕಟ್ಟಿ ನೋಡು, ನಾಟಕ ಮಾಡಿ ನೋಡು’ ಎಂಬ ಹೊಸ ಗಾದೆ ರೂಪುಗೊಂಡಿದೆ. ರಂಗ ತಂಡ ಕಟ್ಟುವುದು ಬಹಳ ಕಷ್ಟ, ಕಟ್ಟಿದರೂ ಅದರಲ್ಲಿ ಯುವ ಪೀಳಿಗೆ ತೊಡಗಿಸಿಕೊಳ್ಳುವುದು ಇನ್ನೂ ಕಷ್ಟ, ಆದ್ದರಿಂದ ಈಗ ಕಟ್ಟಿರುವ ಅರಳಿ ತಂಡವು ಉತ್ತಮ ರೀತಿಯಲ್ಲಿ ರಂಗಪಯಣ ನಡೆಸಲಿ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಸಾರಾಂಗ ನಿರ್ದೇಶಕ ಆರ್.ಸಂತೋಷ್ ನಾಯಕ್, ಗೌತಮ್ ಇತರರು ಇದ್ದರು. ತಂಡದ ಸ್ಥಾಪಕರಾದ ರಮ್ಯಾ ಶೇಖರ್, ಪಾವನಾ ಧನರಾಜ್ ನಿರ್ದೇಶನದಲ್ಲಿ ‘ಉರುವಿ’ ನಾಟಕ ಪ್ರದರ್ಶನಗೊಂಡಿತು.