ಜಿಲ್ಲೆ

ದೊಡ್ಡಭಾವೆಪ್ಪ ಸಾಹಿತ್ಯ ಮತ್ತಷ್ಟು ಪಸರಿಸಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಗಾಂಧೀಜಿ ಸೇರಿ ಅನೇಕ ಮಹನೀಯರನ್ನು ಭೇಟಿಯಾಗಿ ಸ್ವಾತಂತ್ರೃದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದ ದೊಡ್ಡಭಾವೆಪ್ಪನವರ ದೃಷ್ಟಿಯು ವಿಸ್ತೃತ ಕರ್ನಾಟಕ ಮತ್ತು ಅಖಂಡ ಭಾರತ ದೇಶದ ಸಮಗ್ರ ಏಕತೆಯ ಚಿಂತನೆಯಾಗಿತ್ತು ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನಾಟಕ ಸಂಭ್ರಮ-50 ನಿಮಿತ್ತ ಬುಧವಾರ ಏರ್ಪಡಿಸಿದ್ದ ಕಿತ್ತೂರು ಇತಿಹಾಸ ಸಂಶೋಧಕ ಬೈಲಹೊಂಗಲದ ಲಿಂ. ದೊಡ್ಡಭಾವೆಪ್ಪ ಚನ್ನಬಸಪ್ಪ ಮೂಗಿ ದತ್ತಿ ಉದ್ಘಾಟನೆ ಹಾಗೂ ದೊಡ್ಡಭಾವೆಪ್ಪ ಮೂಗಿ ಒಂದು ಐತಿಹಾಸಿಕ ದೃಷ್ಟಿ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೊಡ್ಡಭಾವೆಪ್ಪ ಶ್ರೇಷ್ಠ ಇತಿಹಾಸಕಾರರು. ಅಂದಿನ ಕಾಲದಲ್ಲಿ ಯಾವುದೇ ಸೌಲಭ್ಯ ಇರದಿದ್ದರೂ ಇತಿಹಾಸ ಅಧ್ಯಯನ ಮಾಡಿದರು. ಅಂದು ಅವರು ಕಿತ್ತೂರು ನಾಡಿನ ಸಾಹಿತ್ಯ ತಿಳಿಸಿದ್ದು ವಿಶೇಷ. ಅವರ ಹೆಸರಿನ ದತ್ತಿ ಉದ್ಘಾಟನೆ ಮಾಡಿದ್ದು ಖುಷಿ ಕೊಟ್ಟಿದೆ. ದತ್ತಿ ಮೂಲಕ ಅವರ ಸಾಹಿತ್ಯದ ಶ್ರಮ ಮತ್ತಷ್ಟು ಪಸರಿಸುವಂತಾಗಲಿ. ಅವರ ಸಾಹಿತ್ಯ ಆದರ್ಶವಾಗಲಿ ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕಿತ್ತೂರು ಇತಿಹಾಸ ಬಗ್ಗೆ ಮೊದಲು ಅಧ್ಯಯನ ಮಾಡಿ ಮೊದಲ ಇತಿಹಾಸಕಾರರು ದೊಡ್ಡಭಾವೆಪ್ಪ ಮೂಗಿ. ಇದೇ ರೀತಿ ದೇಶದ ವಿವಿಧ ಘಟನೆಗಳನ್ನು ಪುರಾವೆ ಸಹಿತ ದಾಖಲೆ ಸಹಿತ ನೀಡಿದ್ದಾರೆ. ದೇಶ, ಸ್ವಾತಂತ್ರೃ ಇತಿಹಾಸ ಅರಿತುಕೊಳ್ಳಬೇಕು. ಆಗ ಮಾತ್ರ ಹೊಸ ಇತಿಹಾಸ ಸೃಷ್ಟಿಸಲು ಸಾಧ್ಯ. ಹೀಗಾಗಿ ನಮ್ಮ ಸಂಸ್ಕೃತಿ, ಇತಿಹಾಸದ ಬಗ್ಗೆ ಯುವ ಸಮುದಾಯ ಅರಿತುಕೊಳ್ಳಬೇಕು ಎಂದರು.
ದೊಡ್ಡಭಾವೆಪ್ಪನವರ ಪುತ್ರ ಲಿಂ.ಡಾ. ಶಂಕರ ಮೂಗಿ ರಚಿಸಿದ ದೊಡ್ಡಭಾವೆಪ್ಪ ಮೂಗಿ ಒಂದು ಐತಿಹಾಸಿಕ ದೃಷ್ಟಿ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಚನ್ನಮ್ಮನ ಕಿತ್ತೂರಿನ ಉಪ ಪ್ರಾಂಶುಪಾಲ ಮಹೇಶ ಚನ್ನಂಗಿ ಹಾಗೂ ವಿಜಯಪುರದ ಸವಿತಾ ಮೂಗಿ (ದೇಶಮುಖ) ಉಪನ್ಯಾಸ ನೀಡಿದರು. ಚಂದ್ರಕಾಂತ ಗುರಪ್ಪ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ, ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಹಿರಿಯ ಗ್ರಂಥಾಲಯ ವಿಜ್ಞಾನಿ ಡಾ. ಎಸ್.ಆರ್. ಗುಂಜಾಳ, ಪ್ರಕಾಶ ಮೂಗಿ, ಡಾ.ಶಂಕರ, ಇತರರು ಇದ್ದರು.